ಇಷ್ಟು ದಿನ Nothing ಫೋನ್ಗಳು ಎಂದರೆ ಮಿಡ್-ರೇಂಜ್ ಮತ್ತು ಪ್ರೀಮಿಯಂ ಮಾದರಿಗಳೇ ನೆನಪಿಗೆ ಬರುತ್ತಿದ್ದವು. ಆದರೆ 2025ರಲ್ಲಿ ಕಂಪನಿ “Lite” ಸರಣಿಯ ಮೂಲಕ ಕಡಿಮೆ ಬೆಲೆಯ ವಿಭಾಗಕ್ಕೂ ಕಾಲಿಟ್ಟಿತು. ಈ ಸರಣಿಯ ಮೊದಲ ಫೋನ್ Nothing Phone 3a Lite. ಬೆಲೆ ಕಡಿಮೆ ಮಾಡಲು ಕ್ಯಾಮೆರಾ, ಪ್ರೊಸೆಸರ್ ಮತ್ತು ಬ್ಯಾಟರಿ ವಿಷಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆದರೂ ನಥಿಂಗ್ ಫೋನ್ಗಳ ವಿಶೇಷತೆ ಎನಿಸಿಕೊಂಡಿರುವ ಪಾರದರ್ಶಕ ಹಿಂಭಾಗ ಮತ್ತು ಗ್ಲಿಫ್ ಲೈಟಿಂಗ್ ವಿನ್ಯಾಸವನ್ನು ಕಂಪನಿ ಇಲ್ಲಿಯೂ ಉಳಿಸಿಕೊಂಡಿದೆ. ₹30,000 ಒಳಗಿನ ಮೊಬೈಲ್ಗಳಲ್ಲಿ ನಥಿಂಗ್ ಫೋನ್ 3a ಲೈಟ್ ತನ್ನ ವಿಭಿನ್ನ ವಿನ್ಯಾಸ ಮತ್ತು ಉತ್ತಮ ಡಿಸ್ಪ್ಲೇಯಿಂದ ಗಮನ ಸೆಳೆಯುತ್ತದೆ. ಹಾಗಾದರೆ ಈ ಬೆಲೆಗೆ ನಥಿಂಗ್ ಫೋನ್ 3a ಲೈಟ್ ಹೇಗಿದೆ? ಖರೀದಿಸಲು ಯೋಗ್ಯವೇ ಎಂಬುದನ್ನು ಮುಂದೆ ನೋಡೋಣ.
Nothing Phone 3a Lite ಬೆಲೆ ಎಷ್ಟು?

Nothing Phone 3a Lite 8GB RAM ಮತ್ತು 128GB ಸ್ಟೋರೇಜ್ ಮಾದರಿ ಸುಮಾರು ₹28,790ಕ್ಕೆ ಲಭ್ಯವಿದೆ. 8GB RAM ಮತ್ತು 256GB ಸ್ಟೋರೇಜ್ ಮಾದರಿ ₹29,999ಕ್ಕೆ ಸಿಗುತ್ತದೆ.
ವಿನ್ಯಾಸ: ಬಜೆಟ್ ಫೋನಿನಂತೆ ಕಾಣುವುದೇ ಇಲ್ಲ
ಮುಂಭಾಗ ಮತ್ತು ಹಿಂಭಾಗ ಎರಡೂ ಗಾಜಿನಿಂದ ಮಾಡಲ್ಪಟ್ಟಿರುವ ಈ ಫೋನ್ನ ಹಿಂಭಾಗ ಅರೆ ಪಾರದರ್ಶಕವಾಗಿದೆ. ಇದೇ ಕಾರಣಕ್ಕೆ ಕೈಯಲ್ಲಿ ಹಿಡಿದಾಗ ಈ ಫೋನ್ ಉಳಿದ ಫೋನ್ಗಳಿಗಿಂತ ವಿಭಿನ್ನವಾಗಿ ಕಾಣುತ್ತದೆ, ಬೇರೆ ಬಜೆಟ್ ಫೋನ್ಗಳಂತೆ ಸಾಮಾನ್ಯವಾಗಿ ಕಾಣುವುದಿಲ್ಲ. ಗ್ಲಿಫ್ ಲೈಟಿಂಗ್ ಇದ್ದರೂ, ಹಿಂಭಾಗದ ಬಲಭಾಗದಲ್ಲಿ ಒಂದೇ ಒಂದು ಲೈಟ್ ಪಟ್ಟಿ ಇದೆ. ಹಾಗಾಗಿ ಹಿಂದಿನ Nothing ಫೋನ್ಗಳಲ್ಲಿರುವ ಗ್ಲಿಫ್ ಅನುಭವ ಇಲ್ಲಿ ಅಷ್ಟಾಗಿ ಸಿಗುವುದಿಲ್ಲ.
ತೂಕದ ವಿಷಯಕ್ಕೆ ಬಂದರೆ, 199 ಗ್ರಾಂ ಇರುವ ಈ ಫೋನ್ ಕೈಯಲ್ಲಿ ಆರಾಮದಾಯಕವಾಗಿದೆ. ಇದಕ್ಕೆ IP54 ರೇಟಿಂಗ್ ಕೂಡ ಇರುವುದರಿಂದ ಮಳೆ ಅಥವಾ ಧೂಳಿನಿಂದ ಒಂದಷ್ಟು ರಕ್ಷಣೆ ಸಿಗುತ್ತದೆ. ಆದರೆ ಇದನ್ನು ಸಂಪೂರ್ಣ ನೀರು ನಿರೋಧಕ ಫೋನ್ ಎಂದು ಪರಿಗಣಿಸುವಂತಿಲ್ಲ. ಈ ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಪರದೆ: ಈ ಬೆಲೆಗೆ ಇಷ್ಟು ಒಳ್ಳೆಯ ಪರದೆ ಸಿಗುವುದೇ ವಿಶೇಷ
ಫೋನ್ನಲ್ಲಿ 6.77 ಇಂಚಿನ AMOLED ಡಿಸ್ಪ್ಲೇ ಇದೆ. ಇದರ ರೆಸಲ್ಯೂಶನ್ 1080×2392 ಪಿಕ್ಸೆಲ್ ಇದ್ದು, 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರೀನ್ ಬಳಸುವ ಅನುಭವ ಉತ್ತಮವಾಗಿದೆ. ಇದರ ಜೊತೆಗೆ HDR10 ಬೆಂಬಲ ಮತ್ತು ಕಣ್ಣಿಗೆ ಆಯಾಸ ಆಗದಂತೆ 2160Hz ಡಿಮ್ಮಿಂಗ್ ವ್ಯವಸ್ಥೆಯೂ ಇದೆ. ಕಂಪನಿ ಪ್ರಕಾರ, ಗರಿಷ್ಠ ಬ್ರೈಟ್ನೆಸ್ 3000 ನಿಟ್ಸ್ವರೆಗೆ ಇದೆ. ಹೀಗಾಗಿ ಬಿಸಿಲಿನಲ್ಲೂ ಸ್ಕ್ರೀನ್ ನೋಡಲು ಯಾವುದೇ ತೊಂದರೆ ಇರದು. ಈ ಬೆಲೆಯಲ್ಲಿ ಇಂಥ ಗುಣಮಟ್ಟದ ಪರದೆ ಸಿಗುವುದು ನಿಜಕ್ಕೂ ಗಮನಾರ್ಹ. ಡಿಸ್ಪ್ಲೇಗೆ ಪಾಂಡಾ ಗ್ಲಾಸ್ ರಕ್ಷಣೆಯಿದ್ದು, ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸ್ಕ್ಯಾನರ್ ಕೂಡ ವೇಗವಾಗಿ ಕೆಲಸ ಮಾಡುತ್ತದೆ.
ಕಾರ್ಯಕ್ಷಮತೆ: ದಿನನಿತ್ಯದ ಬಳಕೆಗೆ ಉತ್ತಮ, ಗೇಮಿಂಗ್ಗೆ ಅಷ್ಟೇನೂ ಅಲ್ಲ
ಈ ಫೋನ್ನಲ್ಲಿ MediaTek Dimensity 7300 Pro ಎಂಬ 4nm ಚಿಪ್ ಬಳಸಲಾಗಿದೆ. ಇದರ ಜೊತೆಗೆ 8GB RAM ಮತ್ತು 128GB ಅಥವಾ 256GB ಸ್ಟೋರೇಜ್ ಆಯ್ಕೆಗಳಿವೆ. ಗ್ರಾಫಿಕ್ಸ್ಗಾಗಿ Mali-G615 MC2 ಗ್ರಾಫಿಕ್ಸ್ ಚಿಪ್ ಇದೆ. ಸಾಮಾಜಿಕ ಜಾಲತಾಣ ಬಳಸುವುದು, ಸಂದೇಶ ಕಳುಹಿಸುವುದು, ಇಮೇಲ್ ನೋಡುವುದು ಹಾಗೂ ಒಂದೇ ಬಾರಿಗೆ ಹಲವು ಆ್ಯಪ್ ಬಳಸುವಂಥ ದೈನಂದಿನ ಕೆಲಸಗಳಿಗೆ ಈ ಫೋನ್ ಸರಾಗವಾಗಿ ಕೆಲಸ ಮಾಡುತ್ತದೆ. ಆದರೆ ಭಾರೀ ಗ್ರಾಫಿಕ್ಸ್ ಇರುವ ಗೇಮ್ಗಳಲ್ಲಿ ದುಬಾರಿ ಫೋನ್ಗಳಷ್ಟು ನಯವಾದ ಅನುಭವ ಸಿಗುವುದಿಲ್ಲ, ಸಾಧಾರಣ ಮಟ್ಟದ ಗೇಮಿಂಗ್ಗೆ ಮಾತ್ರ ಇದು ಸೂಕ್ತ. ಶೇಖರಣಾ ಸ್ಥಳ ಕಡಿಮೆಯಾದರೆ ಚಿಂತೆ ಬೇಡ, 2TB ವರೆಗೆ ಮೆಮೊರಿ ಕಾರ್ಡ್ ಸೇರಿಸುವ ಸೌಲಭ್ಯವಿದೆ.
ಕ್ಯಾಮೆರಾ: ಹಗಲಿನಲ್ಲಿ ಉತ್ತಮ, ಕಡಿಮೆ ಬೆಳಕಿನಲ್ಲಿ ಸಾಧಾರಣ
ಹಿಂಭಾಗದಲ್ಲಿ ಮೂರು ಕ್ಯಾಮೆರಾಗಳಿವೆ – OIS ಬೆಂಬಲ ಇರುವ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ. ಮುಖ್ಯ ಕ್ಯಾಮೆರಾದ ಸಂವೇದಕ Nothing Phone 3a ದಲ್ಲಿರುವ ಕ್ಯಾಮೆರಾವನ್ನು ಹೋಲುತ್ತದೆ. ಹಗಲಿನಲ್ಲಿ ತೆಗೆದ ಫೋಟೋಗಳು ಚೆನ್ನಾಗಿಯೇ ಬರುತ್ತವೆ. ಆದರೆ ರಾತ್ರಿ ಅಥವಾ ಕಡಿಮೆ ಬೆಳಕಿನಲ್ಲಿ ಫೋಟೋಗಳಲ್ಲಿನ ವಿವರಗಳು ಸ್ವಲ್ಪ ಕಡಿಮೆಯಾಗುತ್ತವೆ. ಇನ್ನು 16MP ಮುಂಭಾಗದ ಕ್ಯಾಮೆರಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸೂಕ್ತವಾಗುವಂತಹ ಕ್ಲಿಯರ್ ಫೋಟೋಗಳನ್ನು ತೆಗೆಯುತ್ತದೆ.
ಬ್ಯಾಟರಿ: ಒಂದು ದಿನ ಸುಲಭವಾಗಿ ಬರುತ್ತದೆ
5000mAh ಸಾಮರ್ಥ್ಯದ ಬ್ಯಾಟರಿ ಇರುವ ಈ ಫೋನ್ಗೆ 33W ವೇಗದ ಚಾರ್ಜಿಂಗ್ ಬೆಂಬಲವಿದೆ. ಸಾಮಾನ್ಯ ಬಳಕೆದಾರರಿಗೆ ಒಂದು ಪೂರ್ಣ ದಿನದ ಬಳಕೆಗೆ ಈ ಬ್ಯಾಟರಿ ಸಾಕಾಗುತ್ತದೆ. ಆದರೆ ಹೆಚ್ಚು ಸಮಯ ವಿಡಿಯೋ ನೋಡುವುದು ಅಥವಾ ಗೇಮ್ ಆಡುವುದಾದರೆ ಬ್ಯಾಟರಿ ಬೇಗ ಖಾಲಿಯಾಗುವ ಸಾಧ್ಯತೆ ಇದೆ.
ಸಾಫ್ಟ್ವೇರ್: ಸರಳ ಮತ್ತು ಬಳಸಲು ಸುಲಭ
ಫೋನ್ನಲ್ಲಿ Android 15 ಆಧಾರಿತ Nothing OS ಸಾಫ್ಟ್ವೇರ್ ಇದೆ. ಅನಗತ್ಯ ಆ್ಯಪ್ಗಳಿಲ್ಲದ ಸರಳ ಇಂಟರ್ಫೇಸ್ ಬಳಸಲು ಸುಲಭವಾಗಿದ್ದು, ದಿನನಿತ್ಯದ ಬಳಕೆಯಲ್ಲಿ ಗೊಂದಲ ಎನಿಸುವುದಿಲ್ಲ. ಕಂಪನಿ ಮೂರು ಪ್ರಮುಖ ಆವೃತ್ತಿಗಳ ಅಪ್ಡೇಟ್ ನೀಡುವುದಾಗಿ ಹೇಳಿದೆ. ಈ ಬೆಲೆಯಲ್ಲಿ ಇದು ಉತ್ತಮ ಬೆಂಬಲ ಎನ್ನಬಹುದು.
Nothing Phone 3a Lite – ಇಷ್ಟವಾದ ಅಂಶಗಳು ಮತ್ತು ಇಷ್ಟವಾಗದ ಅಂಶಗಳು
ಇಷ್ಟವಾಗುವ ಅಂಶಗಳು
- 120Hz AMOLED ಪರದೆ
- ಗಮನ ಸೆಳೆಯುವ ವಿಭಿನ್ನ ವಿನ್ಯಾಸ
- ಅನಗತ್ಯ ಆ್ಯಪ್ಗಳಿಲ್ಲದ ಸರಳ ಸಾಫ್ಟ್ವೇರ್
- ಮೂರು ವರ್ಷಗಳ ಅಪ್ಡೇಟ್ ಭರವಸೆ
- ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ
ಇಷ್ಟವಾಗದ ಅಂಶಗಳು
- ಕಡಿಮೆ ಬೆಳಕಿನಲ್ಲಿ ಕ್ಯಾಮೆರಾ ಕಾರ್ಯಕ್ಷಮತೆ ಅಷ್ಟೇನೂ ಉತ್ತಮವಾಗಿಲ್ಲ
- ಭಾರೀ ಗೇಮಿಂಗ್ಗೆ ಸೂಕ್ತವಲ್ಲ
- 2MP ಮ್ಯಾಕ್ರೋ ಕ್ಯಾಮೆರಾ ಅಷ್ಟೇನೂ ಉಪಯೋಗಕ್ಕೆ ಬರುವುದಿಲ್ಲ
ಕೊನೆಯ ಮಾತು: ಈ ಫೋನ್ ಖರೀದಿಸಬಹುದೇ?
ನಥಿಂಗ್ ಫೋನ್ 3a ಲೈಟ್ ಕಡಿಮೆ ಬೆಲೆಯ ಫೋನ್ ಆಗಿದ್ದರೂ, ನೋಡುಗರ ಗಮನ ಸೆಳೆಯುವ ವಿನ್ಯಾಸ ಮತ್ತು ಬಳಸುವಾಗ ಪ್ರೀಮಿಯಂ ಅನುಭವ ನೀಡುತ್ತದೆ. ಉತ್ತಮ ಡಿಸ್ಪ್ಲೇ, ವಿಭಿನ್ನ ವಿನ್ಯಾಸ, ಒಳ್ಳೆಯ ಬ್ಯಾಟರಿ ಮತ್ತು ಸರಳ ಸಾಫ್ಟ್ವೇರ್ ಈ ಫೋನ್ನ ಪ್ರಮುಖ ಅಂಶಗಳು. ಫೋಟೋ ಅಥವಾ ಭಾರೀ ಗೇಮಿಂಗ್ಗೆ ಹೆಚ್ಚು ಒತ್ತು ನೀಡದೆ, ದಿನನಿತ್ಯದ ಬಳಕೆಗೆ ವಿಭಿನ್ನವಾಗಿ ಕಾಣುವ ಫೋನ್ ಬೇಕಿದ್ದರೆ ನಥಿಂಗ್ ಫೋನ್ 3a ಲೈಟ್ ಒಳ್ಳೆಯ ಆಯ್ಕೆಯಾಗಬಹುದು.











