ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

OPPO Reno 16 Series ಸಂಪೂರ್ಣ ಸ್ಪೆಸಿಫಿಕೇಶನ್ಸ್ ಮತ್ತು ಬೆಲೆ (2026)

Author
Published
26/09/2026
Updated
26/09/2026
Published On: September 26, 2026 9:25 pm
OPPO Reno 16 Series
Google News
Follow Us

ಮಿಡ್-ಪ್ರೀಮಿಯಂ ಸೆಗ್ಮೆಂಟ್‌ನಲ್ಲಿ ಈಗ ಸಾಕಷ್ಟು ಹೊಸ ಫೋನ್‌ಗಳು ಬರುತ್ತಿವೆ. ಈ ವಿಭಾಗದಲ್ಲಿ ಒಪ್ಪೋ ರೆನೋ ಸೀರೀಸ್ ಕೂಡ ತನ್ನದೇ ಆದ ಸ್ಥಾನ ಹೊಂದಿದೆ. ಡಿಸೈನ್ ಜೊತೆಗೆ ಕ್ಯಾಮೆರಾಗೂ ಹೆಚ್ಚು ಆದ್ಯತೆ ನೀಡುವ ಒಪ್ಪೋ, ಈ ಬಾರಿ ರೆನೋ 16 ಸೀರೀಸ್ ಅಡಿಯಲ್ಲಿ ರೆನೋ 16 5G ಮತ್ತು ರೆನೋ 16c 5G ಎಂಬ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಜುಲೈ 2, 2026 ರಂದು ಭಾರತದಲ್ಲಿ ಲಾಂಚ್ ಆದ ಈ ಎರಡೂ ಫೋನ್‌ಗಳು ಒಂದೇ ಸೀರೀಸ್‌ನ ಡಿಸೈನ್ ಹೊಂದಿದ್ದರೂ, ಫೀಚರ್ಸ್‌ನಲ್ಲಿ ಕೆಲವು ವ್ಯತ್ಯಾಸಗಳಿವೆ. ರೆನೋ 16ನಲ್ಲಿ ಹೆಚ್ಚು ಪ್ರೀಮಿಯಂ ಹಾರ್ಡ್‌ವೇರ್ ಸಿಗುತ್ತದೆ. ರೆನೋ 16cನಲ್ಲಿ ಬ್ಯಾಟರಿ ಮತ್ತು ಮೆಮೊರಿ ಕಾರ್ಡ್ ಆಯ್ಕೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಹಾಗಾದ್ರೆ, ಈ ಎರಡರಲ್ಲಿ ಯಾವ ಫೋನ್ ನಿಮ್ಮ ಬಳಕೆಗೆ ಸೂಕ್ತ? ಎರಡೂ ಫೋನ್‌ಗಳ ಫೀಚರ್ಸ್, ಸ್ಪೆಕ್ಸ್ ಮತ್ತು ಬೆಲೆಯನ್ನು ವಿವರವಾಗಿ ನೋಡೋಣ.

OPPO Reno 16 Series ಪ್ರಮುಖ ಸ್ಪೆಸಿಫಿಕೇಶನ್‌ಗಳು

ಫೀಚರ್OPPO Reno 16OPPO Reno 16c
ಡಿಸ್‌ಪ್ಲೇ6.32-ಇಂಚು AMOLED, 120Hz6.57-ಇಂಚು ಡಿಸ್‌ಪ್ಲೇ, 120Hz
ಪ್ರೊಸೆಸರ್Snapdragon 7 Gen 4MediaTek Dimensity 7300-Energy
RAM8GB / 12GB8GB / 12GB
ಸ್ಟೋರೇಜ್256GB128GB / 256GB
ಮುಖ್ಯ ಕ್ಯಾಮೆರಾ50MP, OIS50MP, OIS
ಟೆಲಿಫೋಟೋ50MP, 3.5x Optical Zoom50MP, 3.5x Optical Zoom
ಅಲ್ಟ್ರಾ-ವೈಡ್50MP8MP
ಫ್ರಂಟ್ ಕ್ಯಾಮೆರಾ50MP50MP
ಬ್ಯಾಟರಿ6700mAh7000mAh
ಫಾಸ್ಟ್ ಚಾರ್ಜಿಂಗ್80W SUPERVOOC80W SUPERVOOC

ರೆನೋ 16 ಮತ್ತು 16c ಡಿಸೈನ್ ಹೇಗಿದೆ?

ರೆನೋ 16 ತೂಕದಲ್ಲಿ ನಿಜವಾಗಲೂ ಹಗುರವಾದ ಫೋನ್. ಟ್ವಿಲೈಟ್ ವೈಲೆಟ್ ಮತ್ತು ಸ್ಟೆಲ್ಲರ್ ಪರ್ಪಲ್ ವೇರಿಯಂಟ್‌ಗಳು ಕೇವಲ 182 ಗ್ರಾಂ ತೂಕ ಹೊಂದಿದ್ದರೆ, ಸ್ಟಾರಿ ವೈಟ್ ವೇರಿಯಂಟ್ 193 ಗ್ರಾಂ ಇದೆ. ಇದರ ದಪ್ಪ ಕೂಡ ಕೇವಲ 0.82cm ಆಗಿದೆ. ಹಾಗಾಗಿ ಒಂದು ಕೈಯಲ್ಲಿ ಹಿಡಿದು ಹೆಚ್ಚು ಸಮಯ ಬಳಸಿದರೂ ಕೈಗೆ ಹೆಚ್ಚು ಭಾರ ಅನಿಸುವುದಿಲ್ಲ. ಜೇಬಿನಲ್ಲಿ ಇಟ್ಟುಕೊಂಡು ಓಡಾಡುವಾಗಲೂ ತೂಕ ಹೆಚ್ಚಾಗಿದೆ ಅನ್ನೋ ಫೀಲ್ ಬರೋದಿಲ್ಲ.

ರೆನೋ 16c ಇನ್ನೊಂದೆಡೆ, ಇದು 195 ರಿಂದ 197 ಗ್ರಾಂ ವರೆಗೆ ತೂಕ. ಇದಕ್ಕೆ ಪ್ರಮುಖ ಕಾರಣ ಇದರೊಳಗೆ ನೀಡಿರುವ ದೊಡ್ಡ ಬ್ಯಾಟರಿ. ಎರಡೂ ಫೋನ್‌ಗಳಲ್ಲಿ ಕ್ರಿಸ್ಟಲ್ ಗಾರ್ಡ್ ಕವರ್ ಗ್ಲಾಸ್ ಬಳಸಲಾಗಿದೆ. ಇದು ಸಾಮಾನ್ಯ ಸ್ಕ್ರ್ಯಾಚ್‌ಗಳಿಂದ ಸ್ಕ್ರೀನ್‌ಗೆ ರಕ್ಷಣೆ ನೀಡುವುದರ ಜೊತೆಗೆ, ಆಕಸ್ಮಿಕವಾಗಿ ಫೋನ್ ಕೆಳಗೆ ಬಿದ್ದಾಗ ಆಗಬಹುದಾದ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಣ್ಣಗಳ ವಿಚಾರದಲ್ಲಿ ಎರಡೂ ಫೋನ್‌ಗಳು ಸ್ಟೆಲ್ಲರ್ ಪರ್ಪಲ್, ಟ್ವಿಲೈಟ್ ವೈಲೆಟ್ ಮತ್ತು ಸ್ಟಾರಿ ವೈಟ್ ಎಂಬ ಮೂರು ಆಯ್ಕೆಗಳಲ್ಲಿ ಲಭ್ಯವಿವೆ.

ಡಿಸ್‌ಪ್ಲೇ ಮತ್ತು ವೀಕ್ಷಣೆಯ ಅನುಭವ

OPPO Reno 16 ಡಿಸ್‌ಪ್ಲೇ

ರೆನೋ 16 ನಲ್ಲಿ 6.32 ಇಂಚಿನ AMOLED ಡಿಸ್‌ಪ್ಲೇ ನೀಡಲಾಗಿದೆ. ಇದು 460 PPI ಪಿಕ್ಸೆಲ್ ಡೆನ್ಸಿಟಿ ಹೊಂದಿದ್ದು, ಟೆಕ್ಸ್ಟ್, ಫೋಟೋ ಮತ್ತು ಸಣ್ಣ ವಿವರಗಳು ಕೂಡ ಶಾರ್ಪ್ ಆಗಿ ಕಾಣುತ್ತವೆ. 120Hz ರಿಫ್ರೆಶ್ ರೇಟ್ ಇರುವುದರಿಂದ ಸ್ಕ್ರಾಲ್ ಮಾಡುವಾಗ, ಆಪ್‌ಗಳನ್ನು ಬಳಸುವಾಗ ಮತ್ತು ಗೇಮ್ ಆಡುವಾಗ ಮೂವ್‌ಮೆಂಟ್ ಸ್ಮೂತ್ ಆಗಿರುತ್ತದೆ. ಇದರ HBM ಬ್ರೈಟ್‌ನೆಸ್ 1800 nits ವರೆಗೆ ಇರುವುದರಿಂದ, ಹೊರಗಡೆ ಬಿಸಿಲಿನಲ್ಲೂ ಕಂಟೆಂಟ್ ಸ್ಪಷ್ಟವಾಗಿ ಕಾಣುತ್ತದೆ.

ರೆನೋ 16c ನಲ್ಲಿ 6.57 ಇಂಚಿನ ದೊಡ್ಡ ಡಿಸ್‌ಪ್ಲೇ ಇದೆ. ಇದರ ಪಿಕ್ಸೆಲ್ ಡೆನ್ಸಿಟಿ 397 PPI ಆಗಿದ್ದು, ಬ್ರೈಟ್‌ನೆಸ್ 1400 nits ವರೆಗೆ ಸಿಗುತ್ತದೆ. ದೊಡ್ಡ ಗಾತ್ರದ ಕಾರಣ ವಿಡಿಯೋ ಮತ್ತು ಇತರೆ ಕಂಟೆಂಟ್ ವೀಕ್ಷಿಸಲು ಆರಾಮದಾಯಕವಾಗಿದೆ. ಹೊರಗಡೆ ಹೆಚ್ಚು ಬೆಳಕು ಇರುವ ಸಂದರ್ಭಗಳಲ್ಲಿ ರೆನೋ 16ಕ್ಕಿಂತ ಬ್ರೈಟ್‌ನೆಸ್ ಕಡಿಮೆ ಅನಿಸಬಹುದು.

ಗೇಮಿಂಗ್ ಮತ್ತು ಪರ್ಫಾರ್ಮೆನ್ಸ್ ಹೇಗಿದೆ?

ಇಲ್ಲಿ ಎರಡರ ನಡುವಿನ ಅತಿ ದೊಡ್ಡ ವ್ಯತ್ಯಾಸ ಕಾಣಿಸುತ್ತದೆ. ರೆನೋ 16 ಒಳಗೆ ಕ್ವಾಲ್ಕಾಮ್ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 4 ಚಿಪ್ ಇದ್ದು, ಅಡ್ರಿನೋ 722 GPU ಜೊತೆ ಬರುತ್ತದೆ. ಈ ಚಿಪ್‌ಸೆಟ್ ಗೇಮಿಂಗ್‌ನಲ್ಲಿ ಒಳ್ಳೆಯ ಫ್ರೇಮ್ ರೇಟ್ ನೀಡುವುದರ ಜೊತೆಗೆ, ಹೆವಿ ಆಪ್‌ಗಳು ಮತ್ತು ಮಲ್ಟಿಟಾಸ್ಕಿಂಗ್ ಮಾಡುವಾಗ ಫೋನ್ ಹ್ಯಾಂಗ್ ಆಗುವ ಸಾಧ್ಯತೆ ಕಡಿಮೆ ಇರುತ್ತದೆ. RAM ಟೈಪ್ ಕೂಡ LPDDR5X ಆಗಿದ್ದು, ಹಳೆಯ ಜನರೇಶನ್‌ಗಿಂತ ವೇಗವಾಗಿ ಕೆಲಸ ಮಾಡುತ್ತದೆ ಮತ್ತು ಬ್ಯಾಟರಿ ಬಳಕೆಯನ್ನೂ ಕಡಿಮೆ ಮಾಡುತ್ತದೆ. RAM ಆಯ್ಕೆ 8GB+256GB ಅಥವಾ 12GB+256GB ಇದೆ.

ರೆನೋ 16c ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300-ಎನರ್ಜಿ ಚಿಪ್‌ಸೆಟ್ ಇದ್ದು, ಆರ್ಮ್ ಮಾಲಿ-G615 GPU ಬಳಸಲಾಗಿದೆ. ಕಾಲ್, ಚಾಟಿಂಗ್, ಸೋಶಿಯಲ್ ಮೀಡಿಯಾ ಮತ್ತು ಲೈಟ್ ಗೇಮಿಂಗ್‌ನಂತಹ ದೈನಂದಿನ ಕೆಲಸಗಳಿಗೆ ಇದು ಸಾಕಾಗುತ್ತದೆ. ಹೆವಿ ಗೇಮ್ಸ್‌ಗಳನ್ನು ಹೈ ಗ್ರಾಫಿಕ್ಸ್‌ನಲ್ಲಿ ಆಡಬೇಕಾದರೆ ರೆನೋ 16ಕ್ಕಿಂತ ಪರ್ಫಾರ್ಮೆನ್ಸ್‌ನಲ್ಲಿ ಹಿಂದೆ ಬೀಳಬಹುದು. RAM ಟೈಪ್ LPDDR4X ಆಗಿದ್ದು, LPDDR5Xಗೆ ಹೋಲಿಸಿದರೆ ವೇಗ ಮತ್ತು ಎಫಿಷಿಯನ್ಸಿಯಲ್ಲಿ ಒಂದಿಷ್ಟು ಕಡಿಮೆ ಇದೆ. ಆದ್ರೆ ಇಲ್ಲಿ ಒಂದು ಪ್ಲಸ್ ಪಾಯಿಂಟ್ ಇದೆ – ಈ ಫೋನ್‌ನಲ್ಲಿ ಮೆಮೊರಿ ಕಾರ್ಡ್ ಸ್ಲಾಟ್ ಇದೆ. ಫೋಟೋ ಮತ್ತು ವಿಡಿಯೋಗಳನ್ನು ಜಾಸ್ತಿ ಸೇವ್ ಮಾಡುವವರಿಗೆ ಈ ಫೀಚರ್ ಉಪಯುಕ್ತವಾಗಬಹುದು.

ಕ್ಯಾಮೆರಾ ಮತ್ತು ಫೋಟೋ ಕ್ವಾಲಿಟಿ

OPPO Reno 16 ಕ್ಯಾಮೆರಾ

ಎರಡೂ ಫೋನ್‌ಗಳಲ್ಲಿ 50MP ಮೇನ್ ಕ್ಯಾಮೆರಾ ಜೊತೆಗೆ OIS ನೀಡಲಾಗಿದೆ. OIS ಅಂದ್ರೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್. ಕೈ ಅಲುಗಾಡಿದರೂ ಚಿತ್ರ ಬ್ಲರ್ ಆಗುವುದನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. ವಿಶೇಷವಾಗಿ ರಾತ್ರಿ ಅಥವಾ ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯುವಾಗ ಈ ಫೀಚರ್ ಉಪಯುಕ್ತವಾಗುತ್ತದೆ. ಇದರ ಜೊತೆಗೆ ಎರಡರಲ್ಲೂ 50MP ಟೆಲಿಫೋಟೋ ಲೆನ್ಸ್ ಮತ್ತು 3.5x ಆಪ್ಟಿಕಲ್ ಜೂಮ್ ಇದೆ. ಹೀಗಾಗಿ ದೂರದಲ್ಲಿರುವ ವಸ್ತುಗಳ ಫೋಟೋ ತೆಗೆದಾಗಲೂ ಕ್ವಾಲಿಟಿ ಕಡಿಮೆ ಆಗಲ್ಲ. ಫ್ರಂಟ್ ಕ್ಯಾಮೆರಾ ಕೂಡ ಎರಡರಲ್ಲೂ 50MP ಆಗಿದೆ.

ಇವೆರಡರ ನಡುವೆ ಪ್ರಮುಖ ವ್ಯತ್ಯಾಸ ಇರುವುದು ಅಲ್ಟ್ರಾ-ವೈಡ್ ಕ್ಯಾಮೆರಾದಲ್ಲಿ. ರೆನೋ 16 ನಲ್ಲಿ 50MP ಅಲ್ಟ್ರಾ-ವೈಡ್ ಸೆನ್ಸರ್ ಜೊತೆಗೆ 116° ಫೀಲ್ಡ್ ಆಫ್ ವ್ಯೂ ಇದೆ. ಇದರಿಂದ ಗ್ರೂಪ್ ಫೋಟೋ, ಬಿಲ್ಡಿಂಗ್ ಮತ್ತು ಲ್ಯಾಂಡ್‌ಸ್ಕೇಪ್‌ನಂತಹ ದೃಶ್ಯಗಳನ್ನು ಹೆಚ್ಚು ಡಿಟೇಲ್‌ನೊಂದಿಗೆ ಸೆರೆಹಿಡಿಯಬಹುದು. ಕಡಿಮೆ ಬೆಳಕಿನಲ್ಲೂ 8MP ಸೆನ್ಸರ್‌ಕ್ಕಿಂತ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಇದೆ. ರೆನೋ 16c ನಲ್ಲಿ ಅಲ್ಟ್ರಾ-ವೈಡ್ ಕ್ಯಾಮೆರಾಗೆ 8MP ಸೆನ್ಸರ್ ನೀಡಲಾಗಿದೆ. ಹಗಲಿನಲ್ಲಿ ದೊಡ್ಡ ವ್ಯತ್ಯಾಸ ಕಾಣಿಸದೇ ಇರಬಹುದು, ಸಂಜೆ ಅಥವಾ ಮನೆಯೊಳಗೆ ತೆಗೆದಾಗ ಚಿತ್ರದಲ್ಲಿ ಡಿಟೇಲ್ ಕಡಿಮೆಯಾಗಿ ಸಾಫ್ಟ್ ಆಗಿ ಕಾಣಿಸಬಹುದು.

ವಿಡಿಯೋ ರೆಕಾರ್ಡಿಂಗ್ ವಿಚಾರದಲ್ಲಿ ರೆನೋ 16ನಲ್ಲಿ 4K ವಿಡಿಯೋವನ್ನು 60fps ವರೆಗೆ ಶೂಟ್ ಮಾಡಬಹುದು. ಆಟ, ಡ್ಯಾನ್ಸ್ ಅಥವಾ ಟ್ರಾಫಿಕ್‌ನಂತಹ ವೇಗವಾಗಿ ಚಲಿಸುವ ದೃಶ್ಯಗಳನ್ನು ರೆಕಾರ್ಡ್ ಮಾಡುವಾಗ ಇದು ಹೆಚ್ಚು ಸ್ಮೂತ್ ಔಟ್‌ಪುಟ್ ನೀಡುತ್ತದೆ. ರೆನೋ 16cನಲ್ಲಿ 4K ರೆಕಾರ್ಡಿಂಗ್ 30fpsಗೆ ಸೀಮಿತವಾಗಿದ್ದು, ಸಾಮಾನ್ಯ ವಿಡಿಯೋಗಳಿಗೆ ಇದು ಸಾಕಾಗುತ್ತದೆ.

ಬ್ಯಾಟರಿ ಬ್ಯಾಕಪ್ ಮತ್ತು ಚಾರ್ಜಿಂಗ್

ರೆನೋ 16c ಇಲ್ಲಿ ಮುಂದೆ ಇದೆ – 7000mAh ಬ್ಯಾಟರಿ ಇರುವುದರಿಂದ ಹೆಚ್ಚು ಬಳಕೆ ಮಾಡುವವರಿಗೂ ಒಂದು ಪೂರ್ತಿ ದಿನ, ಕೆಲವೊಮ್ಮೆ ಒಂದೂವರೆ ದಿನದವರೆಗೆ ಚಾರ್ಜ್ ಬಗ್ಗೆ ಚಿಂತೆ ಮಾಡದೆ ಬಳಸಬಹುದು. ರೆನೋ 16 ನಲ್ಲಿ 6700mAh ಬ್ಯಾಟರಿ ಇದ್ದು, ಇದು ಕೂಡ ಉತ್ತಮ ಬ್ಯಾಕಪ್ ನೀಡುತ್ತದೆ. ಆದ್ರೂ 16cಯ ಬ್ಯಾಟರಿ ಸಾಮರ್ಥ್ಯಕ್ಕಿಂತ ಕಡಿಮೆ.

ಎರಡರಲ್ಲೂ 80W SUPERVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಇದೆ. ಅಂದರೆ 0%ನಿಂದ ಸುಮಾರು 59 ನಿಮಿಷದೊಳಗೆ ಪೂರ್ತಿ ಚಾರ್ಜ್ ಆಗುತ್ತದೆ. ಇದರ ಜೊತೆಗೆ 55W PPS, 13.5W PD ಮತ್ತು 13.5W QC ಸ್ಟ್ಯಾಂಡರ್ಡ್ ಚಾರ್ಜರ್‌ಗಳಿಗೂ ಸಪೋರ್ಟ್ ಇರುವುದರಿಂದ, ಬೇರೆ ಬ್ರ್ಯಾಂಡ್‌ನ ಕಂಪ್ಯಾಟಿಬಲ್ ಚಾರ್ಜರ್ ಬಳಸುವ ಅವಕಾಶವೂ ಇದೆ.

ಸಾಫ್ಟ್‌ವೇರ್ ಮತ್ತು ಇತರೆ ಫೀಚರ್‌ಗಳು

ಎರಡೂ ಫೋನ್‌ಗಳು ColorOS 16 ಆಧಾರಿತ ಆಂಡ್ರಾಯ್ಡ್‌ನಲ್ಲಿ ರನ್ ಆಗುತ್ತವೆ. ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನಿಂದ ಸ್ಕ್ರೀನ್ ಮೇಲೆ ಬೆರಳು ಇಟ್ಟ ತಕ್ಷಣ ಅನ್‌ಲಾಕ್ ಆಗುತ್ತದೆ. ಫೇಸ್ ಅನ್‌ಲಾಕ್ ಕೂಡ ಬ್ಯಾಕಪ್ ಆಯ್ಕೆಯಾಗಿ ಇದೆ. ವೈ-ಫೈ 6 ಸಪೋರ್ಟ್ ಇರುವುದರಿಂದ 6ನೇ ಜನರೇಶನ್ ರೂಟರ್ ಬಳಸಿದಾಗ ಉತ್ತಮ ಇಂಟರ್ನೆಟ್ ಸ್ಪೀಡ್ ಮತ್ತು ಸ್ಟೇಬಲ್ ಕನೆಕ್ಷನ್ ಕೊಡುತ್ತದೆ. ಬ್ಲೂಟೂತ್ 5.4 ಮೂಲಕ ಇಯರ್‌ಬಡ್ಸ್, ಸ್ಮಾರ್ಟ್‌ವಾಚ್ ಸೇರಿದಂತೆ ಹಲವು ಸಾಧನಗಳನ್ನು ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಬಹುದು.

Also Read: ColorOS 17 ಬಿಡುಗಡೆ, ಹೊಸ ಫೀಚರ್ಸ್ ಮತ್ತು ರೋಲ್‌ಔಟ್ ವೇಳಾಪಟ್ಟಿ

ಒಂದು ಗಮನಿಸಬೇಕಾದ ವಿಷಯ ಎಂದರೆ, ಎರಡೂ ಮಾದರಿಗಳಲ್ಲಿ ಎನ್‌ಎಫ್‌ಸಿ ಸಪೋರ್ಟ್ ಇಲ್ಲ. ಹಾಗಾಗಿ ಮೆಟ್ರೋ ಕಾರ್ಡ್ ಟ್ಯಾಪ್ ಮಾಡುವುದು ಅಥವಾ ಫೋನ್ ಮೂಲಕ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್ ಮಾಡುವವರಿಗೆ ಇದು ಕೊರತೆ ಅನಿಸಬಹುದು. ರೆನೋ 16ನಲ್ಲಿ ಇನ್ಫ್ರಾರೆಡ್ ರಿಮೋಟ್ ಕಂಟ್ರೋಲ್ ಇರುವುದರಿಂದ ಟಿವಿ, ಎಸಿ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಸಾಧನಗಳನ್ನು ಮೊಬೈಲ್‌ನಿಂದಲೇ ಕಂಟ್ರೋಲ್ ಮಾಡಬಹುದು. ರೆನೋ 16cನಲ್ಲಿ ಈ ಫೀಚರ್ ನೀಡಲಾಗಿಲ್ಲ.

ಭಾರತದಲ್ಲಿ Reno 16 ಮತ್ತು 16c ಬೆಲೆ

Reno 16 ಮತ್ತು 16c ಬೆಲೆ

ರೆನೋ 16 ಸದ್ಯ ಒಪ್ಪೋ ಸ್ಟೋರ್, ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಕ್ರೋಮಾದಲ್ಲಿ 8GB+256GB ವೇರಿಯಂಟ್‌ಗೆ ₹66,999 ಮತ್ತು 12GB+256GB ಮಾದರಿಗೆ ₹72,999ಕ್ಕೆ ಸಿಗುತ್ತಿದೆ.

ರೆನೋ 16c ಬೆಲೆಯ ವಿಚಾರದಲ್ಲಿ ಸ್ವಲ್ಪ ಜೇಬಿಗೆ ಹಗುರವಾಗಿದೆ. ಸದ್ಯ 8GB+128GB ವೇರಿಯಂಟ್ ₹52,999 ಮತ್ತು 8GB+256GB ವೇರಿಯಂಟ್ ₹66,999 ಬೆಲೆಯಲ್ಲಿ ಲಭ್ಯವಿದೆ. ಬ್ಯಾಂಕ್ ಕಾರ್ಡ್ ಡಿಸ್ಕೌಂಟ್, UPI ಆಫರ್ ಅಥವಾ ಎಕ್ಸ್‌ಚೇಂಜ್ ಬೋನಸ್ ಬಳಸಿದರೆ ಈ ಮೊತ್ತ ಇನ್ನಷ್ಟು ಕಡಿಮೆಯಾಗಬಹುದು. ಬೆಲೆಗಳು ಆಗಾಗ ಬದಲಾಗುವ ಸಾಧ್ಯತೆ ಇರುವುದರಿಂದ, ಖರೀದಿಸುವ ಮೊದಲು ಒಪ್ಪೋ ಆಫಿಶಿಯಲ್ ಸೈಟ್ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಇತ್ತೀಚಿನ ಬೆಲೆಯನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.

ನಿಮ್ಮ ಬಜೆಟ್ ₹50,000 ಒಳಗಿದ್ದರೆ, ₹50,000 ಒಳಗಿನ ಬೆಸ್ಟ್ ಫೋನ್‌ಗಳು ಯಾವುವು ಎಂಬುದನ್ನು ನಮ್ಮ ಈ ಲೇಖನದಲ್ಲಿ ನೋಡಬಹುದು.

ಯಾವ ಫೋನ್ ಆಯ್ಕೆ ಮಾಡಬಹುದು?

ನಿಮಗೆ ಗೇಮಿಂಗ್, ಫೋಟೋಗ್ರಫಿ ಮತ್ತು ಒಳ್ಳೆಯ ಡಿಸ್‌ಪ್ಲೇ ಮುಖ್ಯವಾಗಿದ್ದರೆ ರೆನೋ 16 ನಿಮ್ಮ ಕಡೆಗೆ ಹೆಚ್ಚು ಸೂಕ್ತವಾಗಬಹುದು. ಇದರ ಪರ್ಫಾರ್ಮೆನ್ಸ್, ಕ್ಯಾಮೆರಾ ಮತ್ತು ಡಿಸ್‌ಪ್ಲೇ ವಿಭಾಗದಲ್ಲಿ ಹೆಚ್ಚಿನ ಫೀಚರ್‌ಗಳು ಸಿಗುತ್ತವೆ. ಆದರೆ ಬ್ಯಾಟರಿ ಬ್ಯಾಕಪ್‌ಗೆ ಹೆಚ್ಚು ಆದ್ಯತೆ ಕೊಡುತ್ತೀರಾ, ಮೆಮೊರಿ ಕಾರ್ಡ್ ಸ್ಲಾಟ್ ಬೇಕಾ ಮತ್ತು ಬಜೆಟ್ ಕೂಡ ಕಡಿಮೆ ಇರಬೇಕಾ? ಹಾಗಿದ್ದರೆ ರೆನೋ 16c ನಿಮಗೆ ಒಳ್ಳೆಯ ಆಯ್ಕೆಯಾಗಬಹುದು.

FAQ – ಆಗಾಗ್ಗೆ ಕೇಳುವ ಪ್ರಶ್ನೆಗಳು

1. ರೆನೋ 16 ಮತ್ತು ರೆನೋ 16c ನಡುವೆ ದೊಡ್ಡ ವ್ಯತ್ಯಾಸ ಏನು?

ಎರಡರಲ್ಲೂ ಮುಖ್ಯ ವ್ಯತ್ಯಾಸ ಚಿಪ್‌ಸೆಟ್, ಅಲ್ಟ್ರಾ-ವೈಡ್ ಕ್ಯಾಮೆರಾ, ಡಿಸ್‌ಪ್ಲೇ ಬ್ರೈಟ್‌ನೆಸ್ ಮತ್ತು ಬ್ಯಾಟರಿ ಸಾಮರ್ಥ್ಯದಲ್ಲಿ ಇದೆ. ರೆನೋ 16ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 7 ಜೆನ್ 4 ಚಿಪ್ ಮತ್ತು 50MP ಅಲ್ಟ್ರಾ-ವೈಡ್ ಕ್ಯಾಮೆರಾ ಇದ್ದರೆ, ರೆನೋ 16cನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7300-ಎನರ್ಜಿ ಚಿಪ್ ಮತ್ತು 8MP ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. 16cನಲ್ಲಿ 7000mAh ಬ್ಯಾಟರಿ ಸಿಗುತ್ತದೆ, ರೆನೋ 16ನಲ್ಲಿ 6700mAh ಬ್ಯಾಟರಿ ನೀಡಲಾಗಿದೆ.

2. ಎರಡೂ ಫೋನ್‌ಗಳಲ್ಲಿ ಮೆಮೊರಿ ಕಾರ್ಡ್ ಹಾಕಬಹುದೇ?

ರೆನೋ 16c ನಲ್ಲಿ ಮಾತ್ರ ಸ್ಟೋರೇಜ್ ಕಾರ್ಡ್ ಸಪೋರ್ಟ್ ಇದೆ. ರೆನೋ 16 ನಲ್ಲಿ ಈ ಆಯ್ಕೆ ಇಲ್ಲ.

3. ಚಾರ್ಜಿಂಗ್ ಸ್ಪೀಡ್ ಎಷ್ಟು?

ಎರಡರಲ್ಲೂ 80W SUPERVOOC ಫಾಸ್ಟ್ ಚಾರ್ಜಿಂಗ್ ಇದ್ದು, ಸುಮಾರು 59 ನಿಮಿಷದೊಳಗೆ ಫುಲ್ ಚಾರ್ಜ್ ಆಗುತ್ತೆ.

4. ಎನ್‌ಎಫ್‌ಸಿ ಸಪೋರ್ಟ್ ಇದೆಯಾ?

ಇಲ್ಲ, ಈ ಎರಡೂ ಫೋನ್‌ಗಳಲ್ಲಿ ಎನ್‌ಎಫ್‌ಸಿ ಚಿಪ್ ಇಲ್ಲ, ಹಾಗಾಗಿ ಕಾಂಟ್ಯಾಕ್ಟ್‌ಲೆಸ್ ಪೇಮೆಂಟ್ ಆಪ್ ಸಪೋರ್ಟ್ ಆಗಲ್ಲ.

5. ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಕ್ಯಾಮೆರಾ ಫೋನ್ ಬೇಕಾದವರಿಗೆ ಯಾವುದು ಸೂಕ್ತ?

ರೆನೋ 16c ನೋಡಬಹುದು. ಮೇನ್ ಮತ್ತು ಟೆಲಿಫೋಟೋ ಕ್ಯಾಮೆರಾಗಳು ಚೆನ್ನಾಗಿದ್ದು, ಬೆಲೆಯೂ ರೆನೋ 16ಗಿಂತ ಕಡಿಮೆ ಇದೆ. ಹಾಗಾಗಿ ಕ್ಯಾಮೆರಾಗೆ ಹೆಚ್ಚು ಆದ್ಯತೆ ನೀಡುವವರಿಗೆ ಇದು ಒಳ್ಳೆಯ ಆಯ್ಕೆಯಾಗಬಹುದು.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →