ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

ಕ್ಯಾಮೆರಾ ಪ್ರಿಯರಿಗೆ ಗುಡ್‌ನ್ಯೂಸ್! Vivo X500 ಸರಣಿ ಭಾರತಕ್ಕೆ ಯಾವಾಗ ಬರಲಿದೆ?

Author
Published
02/11/2026
Updated
02/11/2026
Published On: November 2, 2026 8:50 pm
Vivo X500 ಸರಣಿ
Google News
Follow Us

ಕ್ಯಾಮೆರಾ ಫೋನ್ ಅಂದ್ರೆ ವಿವೋ ಅನ್ನೋ ಮಾತು ಈಗ ಹೊಸದಲ್ಲ. ಈ ಸರಣಿ ಆ ಮಾತನ್ನು ಇನ್ನಷ್ಟು ಗಟ್ಟಿ ಮಾಡುವಂತಿದೆ. ಈ ಬಾರಿ ಕಂಪನಿ X500 ಸರಣಿಯನ್ನು ಚೀನಾ, ಮಲೇಷ್ಯಾ ಮತ್ತು ಯುರೋಪ್‌ನಲ್ಲಿ ಬಿಡುಗಡೆ ಮಾಡಿದೆ. X500, X500 Pro ಮತ್ತು X500 Pro Max ಎಂಬ ಮೂರು ಫೋನ್‌ಗಳಿವೆ. ಮೂರೂ ಫೋನ್‌ಗಳಲ್ಲಿ ಬೇರೆ ಬೇರೆ ಫೀಚರ್‌ಗಳಿದ್ದು, ವಿಭಿನ್ನ ಬಜೆಟ್‌ನ ಬಳಕೆದಾರರನ್ನು ಗುರಿಯಾಗಿಸಿಕೊಂಡಿವೆ.

2nm ಚಿಪ್, ದೊಡ್ಡ ಬ್ಯಾಟರಿ ಹಾಗೂ 200MP ಟೆಲಿಫೋಟೋ ಕ್ಯಾಮೆರಾ ಸರಣಿಯ ಪ್ರಮುಖ ಹೈಲೈಟ್‌ಗಳು. ಭಾರತಕ್ಕೆ ನವೆಂಬರ್ ಕೊನೆಯಲ್ಲಿ ಬರಬಹುದು ಎನ್ನುವ ಸುದ್ದಿ ಇದೆ. ಆದರೆ ವಿವೋ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾದರೆ ಈ ಫೋನ್‌ಗಳಲ್ಲಿ ನಿಜಕ್ಕೂ ಏನಿದೆ, ಬೆಲೆ ಎಷ್ಟು ಮತ್ತು ಭಾರತದಲ್ಲಿ ಬಿಡುಗಡೆಯಾದರೆ ಕಾಯಬೇಕೇ? ನೋಡೋಣ.

ವಿನ್ಯಾಸ ಮತ್ತು ಡಿಸ್ಪ್ಲೇ ಹೇಗಿದೆ?

ವಿವೋ X500 ಸರಣಿಯ ಫೋನ್‌ಗಳು ಸನ್‌ಸೆಟ್ ಆರೆಂಜ್, ಸ್ಟಾರಿ ಗ್ರೇ ಮತ್ತು ಮೂನ್‌ಲಿಟ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿವೆ. ಹಿಂಭಾಗದಲ್ಲಿ ದೊಡ್ಡ ದುಂಡನೆಯ ಕ್ಯಾಮೆರಾ ಮಾಡ್ಯೂಲ್ ಇದೆ. ಇದು ಲೋಹದ ಒಂದೇ ತುಂಡಿನಿಂದ ಮಾಡಲಾಗಿದೆ ಎಂದು ಕಂಪನಿ ಹೇಳುತ್ತದೆ. ಫ್ರೇಮ್ ಅಲ್ಯೂಮಿನಿಯಂನಿಂದ ತಯಾರಿಸಲಾಗಿದ್ದು, ಅಂಚುಗಳನ್ನು ಸ್ವಲ್ಪ ಕರ್ವ್ ಮಾಡಿರುವುದರಿಂದ ಕೈಯಲ್ಲಿ ಹಿಡಿಯಲು ಆರಾಮದಾಯಕವಾಗಿರುತ್ತದೆ.

ಪರದೆಯ ಗಾತ್ರವೂ ಫೋನ್‌ಗೆ ಅನುಗುಣವಾಗಿ ಬದಲಾಗುತ್ತದೆ. ಪ್ರೋ ಮ್ಯಾಕ್ಸ್‌ನಲ್ಲಿ 6.85 ಇಂಚಿನ 2K LTPO OLED ಡಿಸ್ಪ್ಲೇ ಇದ್ದರೆ, ಪ್ರೋನಲ್ಲಿ 6.36 ಇಂಚು ಮತ್ತು ಸಾಮಾನ್ಯ X500ನಲ್ಲಿ 6.59 ಇಂಚಿನ ಡಿಸ್ಪ್ಲೇ ಇದೆ. ಮೂರೂ ಫೋನ್‌ಗಳಲ್ಲಿ 144Hz ರಿಫ್ರೆಶ್ ರೇಟ್ ಸಿಗುತ್ತದೆ. ಇಷ್ಟು ದೊಡ್ಡ ಬ್ಯಾಟರಿ ಹೊಂದಿದ್ದರೂ ಪ್ರೋ ಮ್ಯಾಕ್ಸ್‌ನ ದಪ್ಪ ಕೇವಲ 7.95mm ಇದೆ.

ಕ್ಯಾಮೆರಾ ಫೀಚರ್‌ಗಳೇನು?

ಈ ಸರಣಿಯ ಪ್ರಮುಖ ಆಕರ್ಷಣೆಯೇ ಕ್ಯಾಮೆರಾ. ಪ್ರೋ ಮ್ಯಾಕ್ಸ್‌ನಲ್ಲಿ 50MP ZEISS ಮುಖ್ಯ ಕ್ಯಾಮೆರಾ ಇದ್ದು, ಇದರ ಜೊತೆಗೆ 50MP ಅಲ್ಟ್ರಾ-ವೈಡ್ ಮತ್ತು 200MP ZEISS APO ಟೆಲಿಫೋಟೋ ನೀಡಲಾಗಿದೆ. ಈ ಟೆಲಿಫೋಟೋ 85mm ಸಮಾನ ಫೋಕಲ್ ಲೆಂಗ್ತ್ ಹೊಂದಿದೆ. ದೂರದ ದೃಶ್ಯಗಳು ಅಥವಾ ವೇದಿಕೆಯ ಕಾರ್ಯಕ್ರಮಗಳನ್ನು ಜೂಮ್ ಮಾಡಿ ಫೋಟೋ ತೆಗೆದಾಗಲೂ ಹೆಚ್ಚಿನ ವಿವರಗಳನ್ನು ಉಳಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ವಿವೋ ಹೇಳುತ್ತದೆ.

ಪ್ರೋ ಫೋನ್‌ನಲ್ಲಿ ಮುಖ್ಯ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾಗಳು ಇದೇ ರೀತಿಯಲ್ಲಿದ್ದು, ಟೆಲಿಫೋಟೋ 64MP ಆಗಿದೆ. ಸಾಮಾನ್ಯ X500ನಲ್ಲಿ 50MP ಮುಖ್ಯ ಸೆನ್ಸರ್ ಜೊತೆಗೆ 64MP ಪೆರಿಸ್ಕೋಪ್ ಟೆಲಿಫೋಟೋ ಇದ್ದು, 3x ಆಪ್ಟಿಕಲ್ ಜೂಮ್ ಸಿಗುತ್ತದೆ.

ಇದರ ಜೊತೆಗೆ ಪ್ರತ್ಯೇಕವಾಗಿ ಖರೀದಿಸಬಹುದಾದ ZEISS ಟೆಲಿಫೋಟೋ ಎಕ್ಸ್‌ಟೆಂಡರ್ ಕೂಡ ಇದೆ. ಇದನ್ನು ಫೋನ್‌ನ ಹಿಂಭಾಗಕ್ಕೆ ಲೆನ್ಸ್ ರೀತಿಯಲ್ಲಿ ಜೋಡಿಸಬಹುದು. ಪ್ರೋ ಮ್ಯಾಕ್ಸ್‌ಗೆ Gen 2 Ultra ಎಕ್ಸ್‌ಟೆಂಡರ್ ಬಳಸಿದರೆ 400mm ಸಮಾನ ಫೋಕಲ್ ಲೆಂಗ್ತ್ ಸಿಗುತ್ತದೆ. ಆದರೆ ಇದರ ತೂಕ 248 ಗ್ರಾಂ ಇರುವುದರಿಂದ ಹಗುರವಾದ ಆಕ್ಸೆಸರಿಯಂತೂ ಅಲ್ಲ. ಇನ್ನು 153 ಗ್ರಾಂ ತೂಕದ ಚಿಕ್ಕ ಆವೃತ್ತಿಯು 200mm ಸಮಾನ ಫೋಕಲ್ ಲೆಂಗ್ತ್ ನೀಡುತ್ತದೆ ಮತ್ತು ಇದು ಸರಣಿಯ ಎಲ್ಲಾ ಫೋನ್‌ಗಳಿಗೂ ಹೊಂದಿಕೊಳ್ಳುತ್ತದೆ. ಶಟರ್ ಬಟನ್ ಮತ್ತು ಜೂಮ್ ಡಯಲ್ ಹೊಂದಿರುವ ಗ್ರಿಪ್ ಕಿಟ್ ಕೂಡ ಲಭ್ಯವಿದೆ. ಹೆಚ್ಚು ಫೋಟೋ ಮತ್ತು ವಿಡಿಯೋ ಶೂಟ್ ಮಾಡುವವರಿಗೆ ಇವು ಉಪಯೋಗವಾಗಬಹುದು. ಸಾಮಾನ್ಯ ಬಳಕೆದಾರರಿಗೆ ಮಾತ್ರ ಇದು ಹೆಚ್ಚುವರಿ ಖರ್ಚು ಎಂದೇ ಹೇಳಬಹುದು.

Also Read: Vivo X Fold 6 ಭಾರತದಲ್ಲಿ ಲಾಂಚ್: ಬೆಲೆ ₹2,19,999, 200MP ಕ್ಯಾಮೆರಾ, 6,900mAh ಬ್ಯಾಟರಿ

ಚಿಪ್ ಮತ್ತು ಬ್ಯಾಟರಿ

ಪ್ರೋ ಮತ್ತು ಪ್ರೋ ಮ್ಯಾಕ್ಸ್ ಫೋನ್‌ಗಳಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 9600 ಪ್ರೊ ಚಿಪ್ ನೀಡಲಾಗಿದೆ. ಇದು TSMCಯ 2nm ತಂತ್ರಜ್ಞಾನದಲ್ಲಿ ತಯಾರಾಗಿರುವ ಚಿಪ್ ಆಗಿದೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಸಿಂಗಲ್-ಕೋರ್ ಕಾರ್ಯಕ್ಷಮತೆಯಲ್ಲಿ ಸುಮಾರು 17% ಮತ್ತು ಜಿಪಿಯು ಕಾರ್ಯಕ್ಷಮತೆಯಲ್ಲಿ 27% ಸುಧಾರಣೆ ಕಂಡುಬರುತ್ತದೆ ಎಂದು ಮೀಡಿಯಾಟೆಕ್ ಹೇಳಿದೆ. ಸಾಮಾನ್ಯ X500ನಲ್ಲಿ ಡೈಮೆನ್ಸಿಟಿ 9600ಎಂ ಚಿಪ್ ಬಳಸಲಾಗಿದೆ. ಸಾಫ್ಟ್‌ವೇರ್ ವಿಚಾರಕ್ಕೆ ಬಂದರೆ, ಮೂರು ಫೋನ್‌ಗಳಲ್ಲೂ ಆಂಡ್ರಾಯ್ಡ್ 17 ಆಧಾರಿತ OriginOS 7 ಇದೆ.

ಬ್ಯಾಟರಿ ವಿಷಯದಲ್ಲಿ ಒಂದು ಪ್ರಮುಖ ವ್ಯತ್ಯಾಸವಿದೆ. ಪ್ರೋ ಮ್ಯಾಕ್ಸ್‌ನ ಬ್ಯಾಟರಿ ಸಾಮರ್ಥ್ಯ ಮಾರುಕಟ್ಟೆಗೆ ಅನುಗುಣವಾಗಿ ಬದಲಾಗುತ್ತದೆ. ಚೀನಾದಲ್ಲಿ 8,000mAh, ಮಲೇಷ್ಯಾದಲ್ಲಿ 7,800mAh ಮತ್ತು ಯುರೋಪ್ ಆವೃತ್ತಿಯಲ್ಲಿ 6,750mAh ಬ್ಯಾಟರಿ ಇದೆ. ಪ್ರೋನಲ್ಲಿ ಸುಮಾರು 6,500mAh ಬ್ಯಾಟರಿ ಇದ್ದರೆ, ಸಾಮಾನ್ಯ X500ನಲ್ಲಿ 7,500mAh ಬ್ಯಾಟರಿ ಇದೆ.

ವಿವೋ ಲ್ಯಾಬ್ ಪರೀಕ್ಷೆಯ ಪ್ರಕಾರ, 7,800mAh ಆವೃತ್ತಿಯಲ್ಲಿ ಸುಮಾರು 47 ಗಂಟೆಗಳ ವಿಡಿಯೋ ಪ್ಲೇಬ್ಯಾಕ್ ಸಿಗುತ್ತದೆ. ಆದರೆ ನೈಜ ಬಳಕೆಯಲ್ಲಿ ಬ್ಯಾಟರಿ ಬ್ಯಾಕಪ್ ಬಳಕೆಯ ರೀತಿಯನ್ನು ಅವಲಂಬಿಸಿ ಬದಲಾಗುತ್ತದೆ. ಚಾರ್ಜಿಂಗ್ ವಿಚಾರದಲ್ಲಿ 90W ವೈರ್ಡ್ ಮತ್ತು 40W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವಿದೆ.

Vivo X500 ಸರಣಿಯ ಬೆಲೆ ಎಷ್ಟು?

ಭಾರತದಲ್ಲಿ ಮಾತ್ರ ಇನ್ನೂ ಅಧಿಕೃತ ಬೆಲೆ ಪ್ರಕಟವಾಗಿಲ್ಲ. ಕೆಲವು ವರದಿಗಳ ಪ್ರಕಾರ X500 ಸುಮಾರು ₹79,000, ಪ್ರೋ ₹93,000 ಮತ್ತು ಪ್ರೋ ಮ್ಯಾಕ್ಸ್ ಸುಮಾರು ₹1 ಲಕ್ಷ ಇರಬಹುದು ಎನ್ನಲಾಗಿದೆ. ಇನ್ನು ಕೆಲವು ವೆಬ್‌ಸೈಟ್‌ಗಳು ಪ್ರೋ ಮ್ಯಾಕ್ಸ್ ₹1.4 ಲಕ್ಷದಿಂದ ₹1.8 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಿವೆ.

ಭಾರತದಲ್ಲಿ Vivo X500 ಸರಣಿ ಯಾವಾಗ ಲಾಂಚ್? 

ಮೂರೂ ಫೋನ್‌ಗಳು BIS ಪ್ರಮಾಣೀಕರಣದಲ್ಲಿ ಕಾಣಿಸಿಕೊಂಡಿವೆ ಎನ್ನಲಾಗಿದ್ದು, ಇದು ಭಾರತದಲ್ಲಿ ಲಾಂಚ್‌ಗೆ ಸಿದ್ಧತೆ ನಡೆಯುತ್ತಿದೆ ಎಂಬ ಸೂಚನೆ ನೀಡುತ್ತದೆ. ನವೆಂಬರ್ 25ರಂದು ಭಾರತದಲ್ಲಿ ಬಿಡುಗಡೆಯಾಗಬಹುದು ಎಂದು ಕೆಲವು ಟಿಪ್‌ಸ್ಟರ್‌ಗಳು ಹೇಳುತ್ತಿದ್ದಾರೆ. ಆದರೆ ಈ ದಿನಾಂಕವನ್ನು ವಿವೋ ಇನ್ನೂ ಅಧಿಕೃತವಾಗಿ ಖಚಿತಪಡಿಸಿಲ್ಲ.

Also Read: Vivo X300 FE Review: ZEISS ಕ್ಯಾಮೆರಾ ಜೊತೆ ಬಂದ ಫ್ಲ್ಯಾಗ್‌ಶಿಪ್ ಫೋನ್

ಕೊನೆಯ ಮಾತು

ನನ್ನ ಅಭಿಪ್ರಾಯದಲ್ಲಿ, ಸದ್ಯಕ್ಕೆ ಕಾಯುವುದು ಉತ್ತಮ. ಭಾರತಕ್ಕೆ ಯಾವ ಬ್ಯಾಟರಿ ಆವೃತ್ತಿ ಬರುತ್ತದೆ ಮತ್ತು ಬೆಲೆ ಎಷ್ಟಿರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಜೂಮ್ ಮತ್ತು ವಿಡಿಯೋಗೆ ಹೆಚ್ಚಿನ ಆದ್ಯತೆ ನೀಡುವವರಿಗೆ ಪ್ರೋ ಮ್ಯಾಕ್ಸ್ ಹೆಚ್ಚು ಆಕರ್ಷಕ ಆಯ್ಕೆಯಾಗಬಹುದು. ಚಿಕ್ಕ ಗಾತ್ರದ ಫೋನ್ ಇಷ್ಟಪಡುವವರು ಪ್ರೋ ಫೋನ್‌ ಅನ್ನು ಪರಿಗಣಿಸಬಹುದು. ಇನ್ನು ಕಡಿಮೆ ಖರ್ಚಿನಲ್ಲಿ ಉತ್ತಮ ಕ್ಯಾಮೆರಾ ಮತ್ತು ಬ್ಯಾಟರಿ ಬೇಕು ಎನ್ನುವವರಿಗೆ ಸಾಮಾನ್ಯ X500 ಉತ್ತಮ ಆಯ್ಕೆಯಾಗುವ ಸಾಧ್ಯತೆ ಇದೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →