ಮೊಬೈಲ್ ಸುದ್ದಿಮೊಬೈಲ್‌ಗಳುಬೆಸ್ಟ್ ಮೊಬೈಲ್‌ಗಳುವಿಮರ್ಶೆಹೋಲಿಕೆHow To

9,000mAh ಬ್ಯಾಟರಿಯ Redmi Note 17 Pro ಲಾಂಚ್; ಭಾರತದಲ್ಲಿ ಬೆಲೆ ₹36,999ರಿಂದ

Author
Published
10/09/2026
Updated
16/09/2026
Published On: September 10, 2026 1:48 pm
Redmi Note 17 Pro
Google News
Follow Us

ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಯಾವಾಗಲೂ ಸದ್ದು ಮಾಡುವ Redmi, ಈ ಬಾರಿಯೂ ತನ್ನ Note ಸರಣಿಯ ಹೊಸ ಫೋನ್ ಜೊತೆ ಬರುತ್ತಿದೆ. ರೆಡ್ಮಿ ನೋಟ್ 17 ಪ್ರೊ (Redmi Note 17 Pro) ಈಗಾಗಲೇ ಚೀನಾ ಮತ್ತು ಗ್ಲೋಬಲ್ ಮಾರುಕಟ್ಟೆಯಲ್ಲಿ ಲಾಂಚ್ ಆಗಿದ್ದು, ಸೆಪ್ಟೆಂಬರ್ 15, 2026ರಂದು ಈ ಫೋನ್ ಜೊತೆಗೆ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ (Redmi Note 17 Pro Max) ಕೂಡ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

ಈಗಾಗಲೇ ಒಂದು ವಿಷಯ ಎಲ್ಲಾ ಕಡೆ ಚರ್ಚೆ ಆಗ್ತಿದೆ – ಬ್ಯಾಟರಿ. ಇಷ್ಟು ದೊಡ್ಡ ಬ್ಯಾಟರಿ ಇಟ್ಕೊಂಡು ಬರೋ ಫೋನ್ ಈ ರೇಂಜ್‌ನಲ್ಲಿ ಅಪರೂಪ. ಹಾಗಾದ್ರೆ ಇನ್ನೇನೆಲ್ಲಾ ವಿಶೇಷತೆಗಳಿವೆ ಈ ಫೋನ್‌ನಲ್ಲಿ? ಭಾರತದಲ್ಲಿ ಬೆಲೆ ಎಷ್ಟು? ಎಲ್ಲಾ ವಿವರವಾಗಿ ನೋಡೋಣ.

ಬಿಡುಗಡೆ ದಿನಾಂಕ ಮತ್ತು ಲಭ್ಯತೆ

Xiaomi ಸೆಪ್ಟೆಂಬರ್ 15ರಂದು ರೆಡ್ಮಿ ನೋಟ್ 17 ಪ್ರೊ ಮತ್ತು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಎರಡನ್ನೂ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದೇ ಮೊದಲ ಬಾರಿಗೆ ರೆಡ್ಮಿ ನೋಟ್ ಸರಣಿಯಲ್ಲಿ ‘ಪ್ರೊ ಮ್ಯಾಕ್ಸ್’ ಎಂಬ ಹೆಸರಿನ ಫೋನ್ ಕೂಡ ಜೊತೆಯಲ್ಲೇ ಬಂದಿದೆ. ರೆಡ್ಮಿ ನೋಟ್ 17 ಪ್ರೊ ಸೆಪ್ಟೆಂಬರ್ 17ರಿಂದ ಖರೀದಿಗೆ ಲಭ್ಯವಾಗಲಿದ್ದು, ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಸೆಪ್ಟೆಂಬರ್ 23ರಿಂದ ಮಾರಾಟಕ್ಕೆ ಸಿಗಲಿದೆ. ಎರಡೂ ಫೋನ್‌ಗಳನ್ನು Amazon.in, mi.com ಹಾಗೂ ಆಯ್ದ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.

Redmi Note 17 Pro ಬೆಲೆ ಎಷ್ಟು? 

Redmi Note 17 Pro Price

ರೆಡ್ಮಿ ನೋಟ್ 17 ಪ್ರೊ ಅಧಿಕೃತ ಬೆಲೆ ಇದೀಗ ಪ್ರಕಟವಾಗಿದೆ. 8GB RAM + 128GB ಸ್ಟೋರೇಜ್ ವೇರಿಯಂಟ್‌ಗೆ ₹36,999 ಮತ್ತು 8GB RAM + 256GB ಸ್ಟೋರೇಜ್ ವೇರಿಯಂಟ್‌ಗೆ ₹39,999 ಬೆಲೆ ನಿಗದಿಯಾಗಿದೆ. ಈ ಫೋನ್ ಕ್ಲೌಡ್ ಬ್ಲೂ (ಫೋಟೋಕ್ರೊಮ್ಯಾಟಿಕ್ ಫಿನಿಶ್), ಪರ್ಪಲ್ ವೈಬ್ ಮತ್ತು ಸ್ಟೆಲ್ತ್ ಬ್ಲ್ಯಾಕ್ ಬಣ್ಣಗಳಲ್ಲಿ ದೊರೆಯಲಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ ₹3,000 ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ಸಿಗಲಿದೆ.

ಇದು ಕಳೆದ ವರ್ಷದ ರೆಡ್ಮಿ ನೋಟ್ 15 ಪ್ರೊಗಿಂತ ಹೆಚ್ಚಿನ ಬೆಲೆಯಲ್ಲಿ ಬಂದಿದೆ. ಈ ಬೆಲೆ ಏರಿಕೆಗೆ ದೊಡ್ಡ ಬ್ಯಾಟರಿ, ಹೊಸ ಚಿಪ್‌ಸೆಟ್ ಹಾಗೂ ಇತರ ಅಪ್‌ಗ್ರೇಡ್‌ಗಳು ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ, ಟಾಪ್ ವೇರಿಯಂಟ್ ಆದ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ₹49,999ರಿಂದ (8GB+256GB) ಆರಂಭವಾಗುತ್ತದೆ.

Also Read: Redmi 17 5G: ₹23,999 ಬೆಲೆಗೆ 7900mAh ಬ್ಯಾಟರಿ, ಮತ್ತೇನಿದೆ?

ಡಿಸ್‌ಪ್ಲೇ ಹೇಗಿದೆ?

ರೆಡ್ಮಿ ನೋಟ್ 17 ಪ್ರೊ 6.83-ಇಂಚಿನ AMOLED ಡಿಸ್‌ಪ್ಲೇ ಹೊಂದಿದ್ದು, 1.5K (2772 x 1280 ಪಿಕ್ಸೆಲ್) ರೆಸಲ್ಯೂಶನ್ ನೀಡುತ್ತದೆ. 120Hz ರಿಫ್ರೆಶ್ ರೇಟ್ ಮತ್ತು 3500 ನಿಟ್ಸ್‌ವರೆಗಿನ ಪೀಕ್ ಬ್ರೈಟ್‌ನೆಸ್ ಇರುವುದರಿಂದ ಬಿಸಿಲಿನಲ್ಲೂ ಸ್ಕ್ರೀನ್ ಸ್ಪಷ್ಟವಾಗಿ ಕಾಣಬಹುದು. 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಇರುವ ಕಾರಣ ಗೇಮಿಂಗ್ ಸಂದರ್ಭದಲ್ಲಿ ಟಚ್ ರೆಸ್ಪಾನ್ಸ್ ಸ್ಮೂಥ್ ಆಗಿರುತ್ತೆ.

ಸ್ಕ್ರೀನ್ ರಕ್ಷಣೆಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಬಳಸಲಾಗಿದೆ. ಈ ಬೆಲೆಯ ಫೋನ್‌ಗೆ ಇದು ಒಳ್ಳೆಯ ಸೇರ್ಪಡೆಯಾಗಿದೆ. ಡಿಸ್‌ಪ್ಲೇ ಅಡಿಯಲ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, ಫೋನ್ ಅನ್‌ಲಾಕ್ ಮಾಡುವುದು ಸುಲಭ ಮತ್ತು ವೇಗವಾಗಿರುತ್ತದೆ.

ಪರ್ಫಾರ್ಮೆನ್ಸ್ ಮತ್ತು ಗೇಮಿಂಗ್ ಹೇಗಿದೆ?

ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 6s ಜೆನ್ 4 ಚಿಪ್‌ಸೆಟ್ ಬಳಸಲಾಗಿದೆ. ಇದು 4nm ಫ್ಯಾಬ್ರಿಕೇಶನ್ ಪ್ರೊಸೆಸ್‌ನಲ್ಲಿ ತಯಾರಾಗಿದ್ದು, ಗ್ರಾಫಿಕ್ಸ್‌ಗಾಗಿ Adreno 710 GPU ನೀಡಲಾಗಿದೆ.

ಈ ಚಿಪ್‌ಸೆಟ್ ಫ್ಲ್ಯಾಗ್‌ಶಿಪ್ ಮಟ್ಟದ ಗೇಮಿಂಗ್ ಪ್ರೊಸೆಸರ್ ಅಲ್ಲ. ಆದರೆ ದೈನಂದಿನ ಬಳಕೆ, ಸೋಷಿಯಲ್ ಮೀಡಿಯಾ ಮತ್ತು ಲೈಟ್ ಟು ಮಿಡ್ ಗೇಮಿಂಗ್‌ಗೆ ಸಾಕಷ್ಟು ಉತ್ತಮ ಪರ್ಫಾರ್ಮೆನ್ಸ್ ನೀಡುವ ಸಾಧ್ಯತೆಯಿದೆ. ನೀವು ಹೆವಿ ಗೇಮಿಂಗ್ ಮಾಡುವವರಾಗಿದ್ದರೆ, ಇದೇ ಬೆಲೆ ವ್ಯಾಪ್ತಿಯಲ್ಲಿರುವ ಇತರ ಫೋನ್‌ಗಳ ಪ್ರೊಸೆಸರ್‌ಗಳ ಜೊತೆ ಹೋಲಿಕೆ ಮಾಡಿ ನೋಡುವುದು ಉತ್ತಮ.

ಕ್ಯಾಮೆರಾದಲ್ಲಿ ಏನು ಸಿಗಲಿದೆ?

ಭಾರತದ ಅಧಿಕೃತ ಲಾಂಚ್‌ನಲ್ಲಿ ದೃಢಪಟ್ಟಂತೆ, ರೆಡ್ಮಿ ನೋಟ್ 17 ಪ್ರೊ ಹಿಂಭಾಗದಲ್ಲಿ 50MP OIS ಪ್ರೈಮರಿ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ ಇದೆ. ಸೆಲ್ಫಿಗಾಗಿ 16MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ. ಫೋನ್ 4K 30fps ವೀಡಿಯೊ ರೆಕಾರ್ಡಿಂಗ್ ಸಪೋರ್ಟ್ ಮಾಡುತ್ತಿದ್ದು, ವೀಡಿಯೊ ಚಿತ್ರೀಕರಣದ ಸಂದರ್ಭದಲ್ಲಿ OIS ಮತ್ತು EIS ಎರಡೂ ಲಭ್ಯವಿವೆ. ಹೈ ಡೈನಾಮಿಕ್ ಪೋರ್ಟ್ರೇಟ್, ನೈಟ್ ಪೋರ್ಟ್ರೇಟ್, AI ಎರೇಸ್ ಪ್ರೊ, AI ಎಕ್ಸ್‌ಪ್ಯಾನ್ಶನ್ ಸೇರಿದಂತೆ AI ಕ್ರಿಯೇಟಿವಿಟಿ ಸೂಟ್ ಫೀಚರ್‌ಗಳು ಹಾಗೂ ಡೆಡಿಕೇಟೆಡ್ ಅಂಡರ್‌ವಾಟರ್ ಮೋಡ್ ಕೂಡ ಇದೆ.

ಇದೇ ಬೆಲೆಯಲ್ಲಿರುವ ಕೆಲವು ಪ್ರತಿಸ್ಪರ್ಧಿ ಫೋನ್‌ಗಳಲ್ಲಿ 200MP ಕ್ಯಾಮೆರಾ ಸೆನ್ಸರ್ ಇರುವುದನ್ನು ಗಮನಿಸಿದರೆ, ರೆಡ್ಮಿ ನೋಟ್ 17 ಪ್ರೊನಲ್ಲಿ ದೊಡ್ಡ ಮೆಗಾಪಿಕ್ಸೆಲ್ ಸಂಖ್ಯೆಯ ಬದಲಿಗೆ ಬ್ಯಾಟರಿ ಮತ್ತು ಡಿಸ್‌ಪ್ಲೇಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇನ್ನು ಟಾಪ್ ವೇರಿಯಂಟ್ ಆಗಿರುವ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ನಲ್ಲೂ 50MP + 8MP ರಿಯರ್ ಕ್ಯಾಮೆರಾ ಸೆಟಪ್ ಇದೆ. ಆದರೆ ಇದರಲ್ಲಿ 32MP ಫ್ರಂಟ್ ಕ್ಯಾಮೆರಾ ಜೊತೆ 4K ಸೆಲ್ಫಿ ವೀಡಿಯೊ ಸಪೋರ್ಟ್ ಸಿಗುತ್ತದೆ.

ಬ್ಯಾಟರಿ ಎಷ್ಟು ದೊಡ್ಡದು?

ಇದೇ ಈ ಫೋನ್‌ನ ಪ್ರಮುಖ ಹೈಲೈಟ್. ರೆಡ್ಮಿ ನೋಟ್ 17 ಪ್ರೊ 9,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ ಜೊತೆಗೆ ಬಂದಿದ್ದು, ಈ ಬೆಲೆಯಲ್ಲಿ ಇಷ್ಟು ದೊಡ್ಡ ಬ್ಯಾಟರಿ ಹೊಂದಿರುವ ಫೋನ್‌ಗಳು ಬಹಳ ಕಡಿಮೆ. ಜೊತೆಗೆ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಇದೆ. ಟಾಪ್ ವೇರಿಯಂಟ್ ಆದ ಪ್ರೊ ಮ್ಯಾಕ್ಸ್‌ನಲ್ಲಿ 10,000mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಇದೆ.

ಇಷ್ಟೊಂದು ದೊಡ್ಡ ಬ್ಯಾಟರಿ ಇದ್ದರೂ ಫೋನ್ ತೂಕ 223 ಗ್ರಾಂ ಮಾತ್ರ ಇರುವುದು ವಿಶೇಷ. ಆದರೂ, ದೀರ್ಘ ಸಮಯ ಫೋನ್ ಕೈಯಲ್ಲಿ ಹಿಡಿದುಕೊಳ್ಳುವವರಿಗೆ ಈ ತೂಕ ಸ್ವಲ್ಪ ಭಾರ ಎನಿಸಬಹುದು. ಬ್ಯಾಟರಿ ಬ್ಯಾಕಪ್‌ಗೆ ಹೆಚ್ಚಿನ ಆದ್ಯತೆ ನೀಡುವವರಿಗೆ, ಸಾಮಾನ್ಯ 5,000mAh ಬ್ಯಾಟರಿ ಇರುವ ಫೋನ್‌ಗಳಿಗೆ ಹೋಲಿಸಿದರೆ ಇದು ಪ್ರಾಕ್ಟಿಕಲ್ ಆಯ್ಕೆಯಾಗಬಹುದು.

ಬಿಲ್ಡ್ ಮತ್ತು ಸಾಫ್ಟ್‌ವೇರ್ ಹೇಗಿದೆ?

ಫೋನ್ ಆಂಡ್ರಾಯ್ಡ್ 16 ಆಧಾರಿತ HyperOS 3 ಜೊತೆ ಬರುತ್ತಿದೆ. IP66/IP68/IP69/IP69K ರೇಟಿಂಗ್ ಇರುವುದರಿಂದ ಧೂಳು, ನೀರು ಹಾಗೂ ಹೈ-ಪ್ರೆಶರ್ ವಾಟರ್ ಜೆಟ್‌ಗಳಿಂದ ಫೋನ್‌ಗೆ ಉತ್ತಮ ರಕ್ಷಣೆ ಸಿಗುತ್ತದೆ. ಈ ಬಜೆಟ್‌ನಲ್ಲಿ ಇಷ್ಟು ಡ್ಯುರಬಿಲಿಟಿ ನೀಡುವ ಫೋನ್‌ಗಳು ಕಡಿಮೆ. ಸ್ಟೀರಿಯೋ ಸ್ಪೀಕರ್‌ಗಳು ಮತ್ತು 300% ವರೆಗಿನ ವಾಲ್ಯೂಮ್ ಬೂಸ್ಟ್ ಕೂಡ ಇರುವುದರಿಂದ, ಮೀಡಿಯಾ ಬಳಕೆದಾರರಿಗೆ ಇದು ಒಳ್ಳೆಯ ಫೀಚರ್ ಆಗಲಿದೆ.

Also Read: ಹೊಸ Motorola Edge 70 Plus ಲಾಂಚ್: 200MP ಕ್ಯಾಮೆರಾ, 6500mAh ಬ್ಯಾಟರಿ ಜೊತೆ ಬಂತು ಈ ಫೋನ್!

ಕೊನೆಯ ಮಾತು

ರೆಡ್ಮಿ ನೋಟ್ 17 ಪ್ರೊ ಈಗ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. 9,000mAh ಬ್ಯಾಟರಿ ಇರುವುದರಿಂದ, ಬ್ಯಾಟರಿ ಈ ಫೋನ್‌ನ ಪ್ರಮುಖ ಫೀಚರ್‌ಗಳಲ್ಲಿ ಒಂದಾಗಿದೆ. ಜೊತೆಗೆ 1.5K AMOLED ಡಿಸ್‌ಪ್ಲೇ ಮತ್ತು IP66/IP68/IP69/IP69K ರೇಟಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್‌ಗಳನ್ನು ಹೊಂದಿದೆ. ₹36,999ರ ಆರಂಭಿಕ ಬೆಲೆಯಲ್ಲಿ ಸೆಪ್ಟೆಂಬರ್ 17ರಿಂದ ಖರೀದಿಗೆ ಸಿಗಲಿರುವ ಈ ಫೋನ್, ದೊಡ್ಡ ಬ್ಯಾಟರಿ ಮತ್ತು ಉತ್ತಮ ಡಿಸ್‌ಪ್ಲೇ ಬಯಸುವವರಿಗೆ ಗಮನಿಸಬಹುದಾದ ಆಯ್ಕೆಯಾಗಿದೆ.

ಲೇಖನವನ್ನು ಹಂಚಿಕೊಳ್ಳಿ
ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ
Content Writer

Pallavi N

TechKannada ತಂಡದ ಲೇಖಕರು ಸ್ಮಾರ್ಟ್‌ಫೋನ್‌ಗಳು, ಟೆಕ್ ಸುದ್ದಿಗಳು, ಆ್ಯಪ್‌ಗಳು, ಗ್ಯಾಜೆಟ್‌ಗಳು ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಸರಳ ಕನ್ನಡದಲ್ಲಿ ಮಾಹಿತಿ ನೀಡುತ್ತಾರೆ.

ಲೇಖಕರ ಎಲ್ಲಾ ಲೇಖನಗಳು →