ಫೋಲ್ಡಬಲ್ ಫೋನ್‌ಗಳ ಕ್ಷೇತ್ರದಲ್ಲಿ ಇಷ್ಟು ವರ್ಷ ಬಹುತೇಕ ಸ್ಯಾಮ್ಸಂಗ್‌ನದ್ದೇ ಪ್ರಾಬಲ್ಯ ಇತ್ತು. ಆದರೆ ಸೆಪ್ಟೆಂಬರ್ 9, 2026ರಂದು ಆಪಲ್ ತನ್ನ ಮೊದಲ ಫೋಲ್ಡಬಲ್ ಐಫೋನ್ ಆದ ಐಫೋನ್ ಡ್ಯುವೋ (iPhone Duo) ಅನ್ನು ಅಧಿಕೃತವಾಗಿ ಪರಿಚಯಿಸಿದ ನಂತರ ಈ ಪರಿಸ್ಥಿತಿ ಬದಲಾಗಿದೆ. ಇನ್ನೊಂದೆಡೆ, ಸ್ಯಾಮ್ಸಂಗ್ ಜುಲೈ 22, 2026ರಂದು ತನ್ನ ಎಂಟನೇ ತಲೆಮಾರಿನ ಫೋಲ್ಡಬಲ್ ಫೋನ್ ಗ್ಯಾಲಕ್ಸಿ Z ಫೋಲ್ಡ್8 (Galaxy Z Fold8) ಅನ್ನು ಪರಿಚಯಿಸಿ, ಈಗಾಗಲೇ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ.
ಎರಡೂ ಫೋನ್‌ಗಳು ಬುಕ್-ಸ್ಟೈಲ್ ಫೋಲ್ಡಿಂಗ್ ಡಿಸೈನ್ ಹೊಂದಿದ್ದರೂ, ಬೆಲೆ, ಡಿಸ್ಪ್ಲೇ ಆಕಾರ, ಕ್ಯಾಮೆರಾ ಸೆಟಪ್, ಕಾರ್ಯಕ್ಷಮತೆ ಮತ್ತು ಸಾಫ್ಟ್‌ವೇರ್ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ವಿಶೇಷವಾಗಿ ಐಫೋನ್ ಡ್ಯುವೋ ಮೊದಲ ಬಾರಿಗೆ ಆಪಲ್‌ನ ಫೋಲ್ಡಬಲ್ ಅನುಭವವನ್ನು ನೀಡುತ್ತಿರುವುದರಿಂದ, ಈಗಾಗಲೇ ಹಲವು ವರ್ಷಗಳಿಂದ ಫೋಲ್ಡಬಲ್ ಫೋನ್‌ಗಳನ್ನು ನೀಡುತ್ತಿರುವ ಸ್ಯಾಮ್ಸಂಗ್‌ನ ಗ್ಯಾಲಕ್ಸಿ Z ಫೋಲ್ಡ್8 ಜೊತೆ ಇದರ ಹೋಲಿಕೆ ಕುತೂಹಲ ಮೂಡಿಸುತ್ತದೆ.
ಹಾಗಾದರೆ ಈ ಎರಡರಲ್ಲಿ ಯಾವ ಫೋನ್ ಹೆಚ್ಚು ಉತ್ತಮ? ಹೆಚ್ಚುವರಿ ಹಣ ನೀಡಿ ಐಫೋನ್ ಡ್ಯುವೋ ಖರೀದಿಸುವುದು ಯೋಗ್ಯವೇ, ಅಥವಾ ಕಡಿಮೆ ಬೆಲೆಯಲ್ಲಿ ಗ್ಯಾಲಕ್ಸಿ Z ಫೋಲ್ಡ್8 ಆಯ್ಕೆ ಮಾಡುವುದು ಉತ್ತಮವೇ? ಬೆಲೆ, ಡಿಸ್ಪ್ಲೇ, ಪ್ರೊಸೆಸರ್, ಕ್ಯಾಮೆರಾ ಮತ್ತು ಬ್ಯಾಟರಿ ಒಂದೊಂದಾಗಿ ಹೋಲಿಸಿ ನೋಡೋಣ.
iPhone Duo vs Galaxy Z Fold8: ಪ್ರಮುಖ ಹೋಲಿಕೆ
| ಫೀಚರ್ | iPhone Duo | Galaxy Z Fold8 |
|---|---|---|
| ಆರಂಭಿಕ ಬೆಲೆ | ₹2,99,900 | ₹1,74,999 |
| ಒಳಗಿನ ಡಿಸ್ಪ್ಲೇ | 7.6-ಇಂಚು | 7.6-ಇಂಚು |
| ಹೊರಗಿನ ಸ್ಕ್ರೀನ್ | 5.4-ಇಂಚು | 5.5-ಇಂಚು |
| ಪ್ರೊಸೆಸರ್ | A20 Pro | Snapdragon 8 Elite Gen 5 |
| RAM | 12GB | 12GB / 16GB |
| ಮುಖ್ಯ ಕ್ಯಾಮೆರಾ | 48MP | 50MP + OIS |
| ಸಾಫ್ಟ್‌ವೇರ್ | iOS 27 | Android 17 / One UI 9 |
| ವಾಟರ್ ರೆಸಿಸ್ಟೆನ್ಸ್ | IP68 | IP48 |
ಬೆಲೆಯಲ್ಲಿ ಎಷ್ಟು ವ್ಯತ್ಯಾಸವಿದೆ?

ಬೆಲೆಯ ವಿಷಯಕ್ಕೆ ಬಂದರೆ ಎರಡೂ ಫೋನ್‌ಗಳ ನಡುವೆ ದೊಡ್ಡ ಅಂತರವೇ ಇದೆ. ಭಾರತದಲ್ಲಿ ಗ್ಯಾಲಕ್ಸಿ Z ಫೋಲ್ಡ್8 12GB RAM ಮತ್ತು 256GB ಸ್ಟೋರೇಜ್ ವೇರಿಯಂಟ್‌ಗೆ ₹1,74,999ರಿಂದ ಆರಂಭವಾಗುತ್ತದೆ. 512GB ವೇರಿಯಂಟ್ ₹1,94,999 ಹಾಗೂ 1TB ವೇರಿಯಂಟ್ ₹2,34,999 ಬೆಲೆಗೆ ಲಭ್ಯವಿದೆ.

ಐಫೋನ್ ಡ್ಯುವೋ 256GB ವೇರಿಯಂಟ್‌ಗೆ ₹2,99,900ರಿಂದ ಆರಂಭವಾಗಿದ್ದು, 512GBಗೆ ₹3,24,900, 1TBಗೆ ₹3,74,900 ಮತ್ತು 2TBಗೆ ₹4,49,900 ಬೆಲೆ ಇದೆ. ಅಂದರೆ, ಆರಂಭಿಕ ವೇರಿಯಂಟ್‌ನಲ್ಲೇ ಎರಡೂ ಫೋನ್‌ಗಳ ನಡುವೆ ಸುಮಾರು ₹1.25 ಲಕ್ಷದ ಬೆಲೆ ವ್ಯತ್ಯಾಸವಿದೆ. Duo ಪ್ರೀ-ಆರ್ಡರ್ ಅಕ್ಟೋಬರ್ 16 ರಿಂದ ಶುರುವಾಗಲಿದ್ದು, ಮಾರಾಟ ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ. ಇನ್ನೊಂದೆಡೆ Fold8 ಈಗಾಗಲೇ ಆಗಸ್ಟ್ 5 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಸ್ಟೋರೇಜ್ ಆಯ್ಕೆಯಲ್ಲಿಯೂ ಎರಡೂ ಫೋನ್‌ಗಳ ನಡುವೆ ವ್ಯತ್ಯಾಸವಿದೆ. ಐಫೋನ್ ಡ್ಯುವೋ 256GB, 512GB, 1TB ಮತ್ತು 2TB ಎಂಬ ನಾಲ್ಕು ಆಯ್ಕೆಗಳಲ್ಲಿ ಸಿಗುತ್ತದೆ. ಗ್ಯಾಲಕ್ಸಿ Z ಫೋಲ್ಡ್8 256GB, 512GB ಮತ್ತು 1TB ಎಂಬ ಮೂರು ಆಯ್ಕೆಗಳನ್ನು ನೀಡುತ್ತದೆ.
Also Read: iPhone Duo: ₹2,99,900ಕ್ಕೆ Apple ಮೊದಲ Foldable Phone ಬಂತು!
ಸ್ಕ್ರೀನ್ ಮತ್ತು ಡಿಸ್ಪ್ಲೇ ಅನುಭವ
ಡಿಸ್ಪ್ಲೇ ಗಾತ್ರವನ್ನು ನೋಡಿದರೆ ಎರಡೂ ಫೋನ್‌ಗಳ ಒಳಗಿನ ಡಿಸ್ಪ್ಲೇ 7.6 ಇಂಚಿನದ್ದೇ. ಆದರೆ ಎರಡನ್ನೂ ತೆರೆದು ಬಳಸಿದಾಗ ಸಿಗುವ ಅನುಭವ ಒಂದೇ ರೀತಿಯಲ್ಲ. ಐಫೋನ್ ಡ್ಯುವೋ 7.6 ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇ, 1878×2670 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ಪ್ರೊಮೋಷನ್ ಮತ್ತು 3000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ನ್ಯಾನೋ ಟೆಕ್ಸ್ಚರ್ ಫಿನಿಶ್ ಕೂಡ ನೀಡಲಾಗಿದ್ದು, ಹೊರಭಾಗದಲ್ಲಿ 5.4 ಡಿಸ್ಪ್ಲೇ ಪರದೆ ಮತ್ತು ಸೆರಾಮಿಕ್ ಶೀಲ್ಡ್ 2 ರಕ್ಷಣೆ ಇದೆ.
ಗ್ಯಾಲಕ್ಸಿ Z ಫೋಲ್ಡ್8 ಈ ಬಾರಿ ಸಂಪೂರ್ಣ ಹೊಸ ವೈಡ್-ಸ್ಕ್ರೀನ್ ಡಿಸೈನ್‌ಗೆ ಬದಲಾಗಿದೆ. ಇದರ ಒಳಗಿನ ಡಿಸ್ಪ್ಲೇ 7.6-ಇಂಚು (1848×2448) ಆಗಿದ್ದು, ಹೊರಗಿನ ಕವರ್ ಸ್ಕ್ರೀನ್ 5.5-ಇಂಚಿಗೆ ಹೆಚ್ಚಾಗಿದೆ. ಎರಡೂ ಪ್ಯಾನೆಲ್‌ಗಳು LTPO OLED, 1Hz-120Hz ವೇರಿಯಬಲ್ ರಿಫ್ರೆಶ್ ರೇಟ್, HDR10+ ಮತ್ತು 3000 ನಿಟ್ಸ್ ಪೀಕ್ ಬ್ರೈಟ್‌ನೆಸ್ ಹೊಂದಿವೆ. ಫೋಲ್ಡ್ ಮಾಡಿದಾಗ 4:3 ಅನುಪಾತದ ಈ ವೈಡ್ ಡಿಸೈನ್ ವಿಡಿಯೋ ನೋಡುವಾಗ, ಸ್ಪ್ಲಿಟ್-ಸ್ಕ್ರೀನ್ ಮಲ್ಟಿಟಾಸ್ಕಿಂಗ್‌ನಲ್ಲಿ ಹೆಚ್ಚು ಅನುಕೂಲಕರ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ. ಹೊಸ ಹಿಂಜ್ ಮೆಕ್ಯಾನಿಸಂ ಕ್ರೀಸ್ ಅನ್ನು ಕಡಿಮೆ ಕಾಣುವಂತೆ ಮಾಡಿದೆ ಮತ್ತು ಗ್ಲೇರ್ ಅನ್ನು ಹಿಂದಿನ ಮಾಡೆಲ್‌ಗಿಂತ ಶೇ.50 ರಷ್ಟು ಕಡಿಮೆ ಮಾಡುವ ಆಂಟಿ-ರಿಫ್ಲೆಕ್ಟಿವ್ ಕೋಟಿಂಗ್ ಕೂಡ ಇದೆ.
ಸರಳವಾಗಿ ಹೇಳುವುದಾದರೆ, ಕೈಯಲ್ಲಿ ಹಿಡಿದಾಗ Duo ಉದ್ದನೆಯ ಟ್ಯಾಬ್ಲೆಟ್‌ನಂತೆ ಅನುಭವ ನೀಡಿದರೆ, Fold8 ಅಗಲವಾದ, ಚೌಕಾಕಾರದ ಪುಟ್ಟ ನೋಟ್‌ಪ್ಯಾಡ್‌ನಂತೆ ಕಾಣಿಸುತ್ತದೆ.
ಪರ್ಫಾರ್ಮೆನ್ಸ್‌ನಲ್ಲಿ ಯಾರು ಮುಂದೆ?
ಚಿಪ್‌ಸೆಟ್ ವಿಷಯದಲ್ಲಿ ಎರಡೂ ಫೋನ್‌ಗಳು ತಮ್ಮ ಫ್ಲ್ಯಾಗ್‌ಶಿಪ್ ಸಿಲಿಕಾನ್ ಬಳಸಿವೆ. ಐಫೋನ್ ಡ್ಯುವೋ ನಲ್ಲಿ 2nm ತಂತ್ರಜ್ಞಾನದಲ್ಲಿ ತಯಾರಾದ A20 Pro ಚಿಪ್ ಇದ್ದು, 12GB RAM ಜೊತೆಗೆ ಬರುತ್ತದೆ. ಇದೇ ಚಿಪ್ ಐಫೋನ್ 18 ಪ್ರೊ ಸೀರೀಸ್‌ನಲ್ಲಿಯೂ ಬಳಕೆಯಾಗಿದೆ, ಆದ್ದರಿಂದ ಪರ್ಫಾರ್ಮೆನ್ಸ್ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎನ್ನಬಹುದು.
ಗ್ಯಾಲಕ್ಸಿ Z ಫೋಲ್ಡ್8ನಲ್ಲಿ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಜೆನ್ 5 ಚಿಪ್ ಇದ್ದು, 12GB ಮತ್ತು 16GB RAM ಆಯ್ಕೆಗಳಿವೆ. 1TB ವೇರಿಯಂಟ್‌ನಲ್ಲಿ 16GB RAM ನೀಡಲಾಗಿದೆ.
ಈ ಚಿಪ್ ಆಂಡ್ರಾಯ್ಡ್ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಈಗ ಲಭ್ಯವಿರುವ ಅತ್ಯುತ್ತಮ ಪ್ರೊಸೆಸರ್‌ಗಳಲ್ಲಿ ಒಂದಾಗಿದೆ. ದೈನಂದಿನ ಬಳಕೆಯಲ್ಲಿ, ಮಲ್ಟಿಟಾಸ್ಕಿಂಗ್‌ನಲ್ಲಿ ಅಥವಾ ಗೇಮಿಂಗ್‌ನಲ್ಲಿ ಎರಡೂ ಫೋನ್‌ಗಳು ನಿಧಾನವಾಗುತ್ತವೆ ಎಂಬ ಚಿಂತೆ ಬೇಡ; ಎರಡೂ ಅಷ್ಟೇ ಸಮರ್ಥವಾಗಿವೆ. ವ್ಯತ್ಯಾಸ ಇರುವುದು ಸಾಫ್ಟ್‌ವೇರ್ ಆಪ್ಟಿಮೈಸೇಶನ್ ಮತ್ತು ಫೋಲ್ಡ್ ಸ್ಕ್ರೀನ್‌ಗೆ ಆಪ್‌ಗಳು ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತವೆ ಎಂಬುದರಲ್ಲಿ.
ಕ್ಯಾಮೆರಾ ಸೆಟಪ್ ಹೇಗಿದೆ?

ಐಫೋನ್ ಡ್ಯುವೋ ಹಿಂಭಾಗದಲ್ಲಿ 48MP ಮುಖ್ಯ ಕ್ಯಾಮೆರಾ (ಎಫ್/1.6) ಮತ್ತು 48MP ಅಲ್ಟ್ರಾವೈಡ್ ಕ್ಯಾಮೆರಾ (ಎಫ್/2.2) ಹೊಂದಿದೆ. ಮುಂಭಾಗದಲ್ಲಿ 12MP ಸೆಂಟರ್ ಸ್ಟೇಜ್ ಕ್ಯಾಮೆರಾ ಜೊತೆಗೆ ಒಳಗಿನ ಸ್ಕ್ರೀನ್‌ನಲ್ಲಿ ಅಂಡರ್-ಡಿಸ್ಪ್ಲೇ ಫೇಸ್‌ಟೈಮ್ ಕ್ಯಾಮೆರಾ ನೀಡಲಾಗಿದೆ.
ಗ್ಯಾಲಕ್ಸಿ Z ಫೋಲ್ಡ್8ನಲ್ಲಿ 50MP ಮುಖ್ಯ ಕ್ಯಾಮೆರಾ (f/1.8, OIS) ಮತ್ತು 50MP ಅಲ್ಟ್ರಾವೈಡ್ (f/1.9) ಇದೆ. ಸೆಲ್ಫಿ ಕ್ಯಾಮೆರಾ ಎರಡೂ ಸ್ಕ್ರೀನ್‌ಗಳಲ್ಲಿ 10MP ಆಗಿದ್ದು, ಆಟೋಫೋಕಸ್ ಇಲ್ಲ. ವಿಡಿಯೋ ರೆಕಾರ್ಡಿಂಗ್ ವಿಷಯದಲ್ಲಿ ಫೋಲ್ಡ್8 ಹಿಂಭಾಗದ ಕ್ಯಾಮೆರಾದಲ್ಲಿ 8K 30fps ವರೆಗೆ ಸಪೋರ್ಟ್ ಮಾಡುತ್ತದೆ, ‘ಮೈ ಫ್ಯಾನ್‌ಕ್ಯಾಮ್’ ಎಂಬ ವೈಶಿಷ್ಟ್ಯವು ಚಲಿಸುತ್ತಿರುವ ವ್ಯಕ್ತಿ ಅಥವಾ ವಸ್ತುವನ್ನು ಟ್ರ್ಯಾಕ್ ಮಾಡಿ, ಅದನ್ನು ಫ್ರೇಮ್‌ನೊಳಗೆ ಸರಿಯಾಗಿ ಇರಿಸಲು ಸಹಾಯ ಮಾಡುತ್ತದೆ.
ಸಂಖ್ಯೆಗಳ ಆಧಾರದಲ್ಲಿ ನೋಡಿದರೆ, ಮೆಗಾಪಿಕ್ಸೆಲ್ ಮತ್ತು OIS ಇರುವಿಕೆಯಲ್ಲಿ Fold8 ಸ್ವಲ್ಪ ಮುಂದೆ ಇದೆ ಎನ್ನಬಹುದು, ಆದರೆ ನೈಜ ಫೋಟೋ ಗುಣಮಟ್ಟ ಹೇಗಿರುತ್ತದೆ ಎಂಬುದು ಎರಡೂ ಫೋನ್‌ಗಳ ವಿವರವಾದ ಕ್ಯಾಮೆರಾ ರಿವ್ಯೂಗಳು ಬಂದ ನಂತರವೇ ಸ್ಪಷ್ಟವಾಗಲಿದೆ.
ಬ್ಯಾಟರಿ ಬ್ಯಾಕಪ್ ಮತ್ತು ಚಾರ್ಜಿಂಗ್
ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ ಐಫೋನ್ ಡ್ಯುವೋದ ನಿಖರವಾದ mAh ಅಂಕಿಯನ್ನು ಆಪಲ್ ಬಹಿರಂಗಪಡಿಸಿಲ್ಲ. ಆದರೆ ವೈರ್ಡ್ ಚಾರ್ಜಿಂಗ್‌ನಲ್ಲಿ 20 ನಿಮಿಷಗಳಲ್ಲಿ 50% ಚಾರ್ಜ್ ಆಗುತ್ತದೆ ಎಂದು ಆಪಲ್ ಹೇಳಿಕೊಂಡಿದೆ. 35W MagSafe ಅಥವಾ Qi2 ವೈರ್‌ಲೆಸ್ ಚಾರ್ಜಿಂಗ್ ಬಳಸಿದಾಗ 50% ಚಾರ್ಜ್ ಪಡೆಯಲು ಸುಮಾರು 30 ನಿಮಿಷ ಬೇಕಾಗುತ್ತದೆ.

ಗ್ಯಾಲಕ್ಸಿ Z ಫೋಲ್ಡ್8ನಲ್ಲಿ 4,800mAh ಬ್ಯಾಟರಿ ಇದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 20W Qi2 Ready ವೈರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಸಂಖ್ಯೆಯಲ್ಲಿ ಸ್ಯಾಮ್ಸಂಗ್‌ನ ವೈರ್ಡ್ ಚಾರ್ಜಿಂಗ್ ವೇಗ ಜಾಸ್ತಿ ಇರುವಂತೆ ಕಂಡರೂ, ಪ್ರತಿ ಫೋನ್‌ನ ನಿಜವಾದ ಬ್ಯಾಟರಿ ಬ್ಯಾಕಪ್ ಆ ಸಾಫ್ಟ್‌ವೇರ್ ಆಪ್ಟಿಮೈಸೇಶನ್ ಮತ್ತು ಸ್ಕ್ರೀನ್ ಬಳಕೆ ಮೇಲೆ ಅವಲಂಬಿತವಾಗಿರುತ್ತದೆ.
ವಿನ್ಯಾಸ ಮತ್ತು ಸಾಫ್ಟ್‌ವೇರ್ ಅನುಭವ
ಬಿಲ್ಡ್ ಕ್ವಾಲಿಟಿ ವಿಷಯದಲ್ಲಿ ಐಫೋನ್ ಡ್ಯುವೋ ಗ್ರೇಡ್ 5 ಟೈಟಾನಿಯಂ ಫ್ರೇಮ್ ಮತ್ತು ಹಿಂಜ್ ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗದಲ್ಲಿ ಸೆರಾಮಿಕ್ ಶೀಲ್ಡ್ 2 ಮತ್ತು IP68 ರೇಟಿಂಗ್ ಹೊಂದಿದೆ. ಬಯೋಮೆಟ್ರಿಕ್ ಸೆಕ್ಯುರಿಟಿಗಾಗಿ ಫೇಸ್ ಐಡಿ ಬದಲಿಗೆ ಸೈಡ್ ಬಟನ್‌ನಲ್ಲಿ ಟಚ್ ಐಡಿ ನೀಡಿರುವುದು ಗಮನಿಸಬೇಕಾದ ಬದಲಾವಣೆ. ಫೋನ್ eSIM ಮಾತ್ರ ಸಪೋರ್ಟ್ ಮಾಡುತ್ತದೆ ಮತ್ತು ಫಿಸಿಕಲ್ ಸಿಮ್ ಟ್ರೇ ಇಲ್ಲ. ಇದು iOS 27ನಲ್ಲಿ ಕಾರ್ಯನಿರ್ವಹಿಸಲಿದ್ದು, ಸ್ಟೈಲಸ್ ಸಪೋರ್ಟ್ ಕೂಡ ಇದೆ.
ಗ್ಯಾಲಕ್ಸಿ Z ಫೋಲ್ಡ್8 ಅಡ್ವಾನ್ಸ್ಡ್ಆರ್ಮರ್ ಅಲ್ಯೂಮಿನಿಯಂ ಫ್ರೇಮ್ ಮತ್ತು ಗೊರಿಲ್ಲಾ ಗ್ಲಾಸ್ ಸೆರಾಮಿಕ್ 3 ಕವರ್ ಗ್ಲಾಸ್ ಹೊಂದಿದ್ದು, IP48 ರೇಟಿಂಗ್ ಪಡೆದಿದೆ. ಡ್ಯುವೋಗೆ IP68 ರೇಟಿಂಗ್ ಇರುವುದರಿಂದ, ನೀರಿನ ಪ್ರತಿರೋಧದ ವಿಷಯದಲ್ಲಿ ಆಪಲ್ ಸ್ವಲ್ಪ ಮುಂದೆ ಇದೆ. ಫೋನ್ ಆಂಡ್ರಾಯ್ಡ್ 17 ಆಧಾರಿತ One UI 9 ನಲ್ಲಿ ಬರುತ್ತದೆ ಮತ್ತು ಫಿಸಿಕಲ್ + eSIM ಎರಡೂ ಸಪೋರ್ಟ್ ಮಾಡುತ್ತದೆ. ಸ್ಯಾಮ್ಸಂಗ್ ಡೆಕ್ಸ್, ಕಾಲ್ ಬ್ರಿಫ್ ಮತ್ತು ಮೈ ಫ್ಯಾನ್‌ಕ್ಯಾಮ್‌ನಂತಹ ಫೀಚರ್‌ಗಳ ಜೊತೆಗೆ ಏಳು ವರ್ಷಗಳ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಭರವಸೆ ಕೂಡ ಸಿಗುತ್ತದೆ.
ಯಾವ ಫೋನ್ ಖರೀದಿಸಬೇಕು?
ಕೊನೆಗೆ ಯಾವ ಫೋನ್ ಆಯ್ಕೆ ಮಾಡಬೇಕು ಎನ್ನುವುದು ನಿಮ್ಮ ಬಜೆಟ್ ಮತ್ತು ನೀವು ಈಗಾಗಲೇ ಬಳಸುತ್ತಿರುವ ಇಕೋಸಿಸ್ಟಂ ಮೇಲೆ ಅವಲಂಬಿತವಾಗಿರುತ್ತದೆ. ಈಗಾಗಲೇ ಐಫೋನ್ ಬಳಸುತ್ತಿರುವವರು, iMessage, FaceTime, Apple Pencil ಬೆಂಬಲ ಮತ್ತು iOS ಇಕೋಸಿಸಂ ಅನ್ನು ಮುಂದುವರಿಸಲು ಬಯಸಿದರೆ ಐಫೋನ್ ಡ್ಯುವೋ ಉತ್ತಮ ಆಯ್ಕೆಯಾಗಬಹುದು. ಆದರೆ ಇದಕ್ಕಾಗಿ ಸುಮಾರು ₹1.25 ಲಕ್ಷ ಹೆಚ್ಚುವರಿ ಹಣ ಖರ್ಚು ಮಾಡಬೇಕಾಗುತ್ತದೆ. ಜೊತೆಗೆ, ಇದು ಆಪಲ್‌ನ ಮೊದಲ ಫೋಲ್ಡಬಲ್ ಆಗಿರುವುದರಿಂದ, ಫಸ್ಟ್-ಜನರೇಶನ್ ಫೋನ್‌ಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳ ಸಾಧ್ಯತೆಯನ್ನೂ ಮರೆಯಬಾರದು.
ಮತ್ತೊಂದೆಡೆ, ಕಡಿಮೆ ಬೆಲೆಯಲ್ಲಿ ಫೋಲ್ಡಬಲ್ ಫೋನ್, ಹಲವು ವರ್ಷಗಳ ಸ್ಯಾಮ್ಸಂಗ್‌ನ ಫೋಲ್ಡಬಲ್ ಅನುಭವ ಮತ್ತು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್ ಬೇಕಿದ್ದರೆ ಗ್ಯಾಲಕ್ಸಿ Z ಫೋಲ್ಡ್8 ಹೆಚ್ಚು ಪ್ರಾಕ್ಟಿಕಲ್ ಆಯ್ಕೆಯಾಗಿದೆ. ಅಗಲವಾದ ಸ್ಕ್ರೀನ್ ಮತ್ತು ಬೆಲೆಗೆ ತಕ್ಕ ವ್ಯಾಲ್ಯೂಗೆ ಆದ್ಯತೆ ನೀಡುವವರಿಗೂ ಇದು ಹೆಚ್ಚು ಸೂಕ್ತವಾಗಬಹುದು. ಜೊತೆಗೆ, ಈಗಾಗಲೇ ಮಾರಾಟದಲ್ಲಿರುವುದರಿಂದ ಎಕ್ಸ್‌ಚೇಂಜ್ ಆಫರ್, ಬ್ಯಾಂಕ್ ಆಫರ್ ಅಥವಾ EMIಯಂತಹ ಆಯ್ಕೆಗಳನ್ನೂ ಪರಿಶೀಲಿಸಬಹುದು.
ಒಟ್ಟಿನಲ್ಲಿ, ಹಣದ ವಿಚಾರ ದೊಡ್ಡ ಸಮಸ್ಯೆಯಾಗದಿದ್ದರೆ ಮತ್ತು ಆಪಲ್‌ನ ಇಕೋಸಿಸಂ ಮುಖ್ಯವಾಗಿದ್ದರೆ ಐಫೋನ್ ಡ್ಯುವೋ ಕಡೆ ಹೋಗಬಹುದು. ಆದರೆ ಕಡಿಮೆ ಬೆಲೆಯಲ್ಲಿ ಫೋಲ್ಡಬಲ್ ಫೋನ್‌ನ ಅನುಭವ ಮತ್ತು ದೈನಂದಿನ ಬಳಕೆಗೆ ಹೆಚ್ಚು ಅನುಕೂಲವಾಗುವ ಫೋನ್ ಬೇಕಿದ್ದರೆ ಗ್ಯಾಲಕ್ಸಿ Z ಫೋಲ್ಡ್8 ಉತ್ತಮ ಆಯ್ಕೆಯಾಗಿದೆ.
ಒಟ್ಟಾರೆ ಯಾವುದು ಉತ್ತಮ?
ಐಫೋನ್ ಡ್ಯುವೋ ಮತ್ತು ಗ್ಯಾಲಕ್ಸಿ Z ಫೋಲ್ಡ್8 ಎರಡೂ ತಮ್ಮದೇ ಆದ ಬಲಗಳನ್ನು ಹೊಂದಿರುವ ಫೋನ್‌ಗಳು. ಆಪಲ್ ಬಿಲ್ಡ್ ಕ್ವಾಲಿಟಿ, IP68 ರೇಟಿಂಗ್ ಮತ್ತು iOS ಇಕೋಸಿಸಂ ಪ್ರಮುಖ ಆಕರ್ಷಣೆಯಾಗಿದ್ದರೆ, ಸ್ಯಾಮ್ಸಂಗ್ ಕ್ಯಾಮೆರಾ, ಚಾರ್ಜಿಂಗ್ ವೇಗ ಮತ್ತು ಬೆಲೆಯ ವಿಷಯದಲ್ಲಿ ಮುಂದೆ ಇದೆ.
ಇವೆರಡರಲ್ಲಿ ಯಾವುದನ್ನೂ “ಪರ್ಫೆಕ್ಟ್” ಫೋಲ್ಡಬಲ್ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಅಗತ್ಯ ಮತ್ತು ಬಜೆಟ್‌ಗೆ ಯಾವುದು ಹೆಚ್ಚು ಹೊಂದಿಕೆಯಾಗುತ್ತದೆ ಎನ್ನುವುದೇ ಇಲ್ಲಿ ಮುಖ್ಯ. ಖರೀದಿಸುವ ಮೊದಲು ಸಾಧ್ಯವಾದರೆ ಆಫ್‌ಲೈನ್ ಸ್ಟೋರ್‌ನಲ್ಲಿ ಎರಡೂ ಫೋನ್‌ಗಳನ್ನು ಕೈಯಲ್ಲಿ ಹಿಡಿದು ನೋಡುವುದು ಒಳ್ಳೆಯದು. ಫೋಲ್ಡಬಲ್ ಫೋನ್ ಆಯ್ಕೆ ಮಾಡುವಾಗ ಸ್ಕ್ರೀನ್ ಗಾತ್ರದ ಜೊತೆಗೆ ಫೋನ್‌ನ ತೂಕ, ದಪ್ಪ ಮತ್ತು ಕೈಯಲ್ಲಿ ಹಿಡಿದಾಗ ಸಿಗುವ ಅನುಭವವೂ ಮುಖ್ಯವಾಗುತ್ತದೆ.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
1. ಐಫೋನ್ ಡ್ಯುವೋ ಭಾರತದಲ್ಲಿ ಎಷ್ಟು ಬೆಲೆ?
ಐಫೋನ್ ಡ್ಯುವೋ ಭಾರತದಲ್ಲಿ 256GB ವೇರಿಯಂಟ್‌ಗೆ ₹2,99,900ರಿಂದ ಆರಂಭವಾಗಿ, 2TB ವೇರಿಯಂಟ್‌ಗೆ ₹4,49,900ವರೆಗೆ ಬೆಲೆಗೆ ಸಿಗುತ್ತದೆ.
2. ಗ್ಯಾಲಕ್ಸಿ Z ಫೋಲ್ಡ್8 ಭಾರತದಲ್ಲಿ ಎಷ್ಟು ಬೆಲೆ?
ಗ್ಯಾಲಕ್ಸಿ Z ಫೋಲ್ಡ್8 256GB ವೇರಿಯಂಟ್‌ಗೆ ₹1,74,999ರಿಂದ ಶುರುವಾಗಿ, 1TB ವೇರಿಯಂಟ್‌ಗೆ ₹2,34,999ವರೆಗೆ ಬೆಲೆ ಇದೆ.
3. ಐಫೋನ್ ಡ್ಯುವೋದಲ್ಲಿ Face ID ಇದೆಯೇ?
ಇಲ್ಲ, ಐಫೋನ್ ಡ್ಯುವೋದಲ್ಲಿ Face ID ಬದಲು ಸೈಡ್ ಬಟನ್‌ನಲ್ಲಿ Touch ID ನೀಡಲಾಗಿದೆ.
4. ಯಾವ ಫೋನ್‌ಗೆ ವಾಟರ್ ರೆಸಿಸ್ಟೆನ್ಸ್ ಜಾಸ್ತಿ?
ಐಫೋನ್ ಡ್ಯುವೋ IP68 ರೇಟಿಂಗ್ ಹೊಂದಿದ್ದು, ಗ್ಯಾಲಕ್ಸಿ Z ಫೋಲ್ಡ್8 ನ IP48 ಗಿಂತ ಹೆಚ್ಚಿನ ನೀರಿನ ಪ್ರತಿರೋಧ ನೀಡುತ್ತದೆ.
5. ಐಫೋನ್ ಡ್ಯುವೋ ಯಾವಾಗ ಮಾರುಕಟ್ಟೆಯಲ್ಲಿ ಸಿಗುತ್ತದೆ?
ಐಫೋನ್ ಡ್ಯುವೋಗೆ ಪ್ರೀ-ಆರ್ಡರ್ ಅಕ್ಟೋಬರ್ 16, 2026ರಿಂದ ಆರಂಭವಾಗಲಿದ್ದು, ಮಾರಾಟ ಅಕ್ಟೋಬರ್ 23, 2026ರಿಂದ ಶುರುವಾಗಲಿದೆ.










